ಶಿವಮೊಗ್ಗ: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಇಂಜಿನಿಯರ್ ವಿಭಾಗದ ಅಕೌಂಟ್ ಸೆಕ್ಷನ್ ಕೇಸ್ ವರ್ಕರ್ ಸಿದ್ದೇಶ್ವರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಾಲಿಕೆ ಆವರಣದಲ್ಲಿರುವ ಇಂಜಿನಿಯರಿಂಗ್ ಕಟ್ಟಡದ ಮೇಲೆ ಶೆಡ್ ಅಳವಡಿಕೆ ಕಾಮಗಾರಿಗೆ 4.66 ಲಕ್ಷ ರೂ.ಗೆ ಇ-ಟೆಂಡರ್ ದೊರೆತಿದ್ದು ಕಾರ್ಯಾದೇಶ ಪಡೆದ ಗುತ್ತಿಗೆದಾರರು 2024ರ ಡಿಸೆಂಬರ್ ನಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು.
ಕಾಮಗಾರಿಯ ಬಿಲ್ ಮಂಜೂರು ಮಾಡುವಂತೆ ಗುತ್ತಿಗೆದಾರ ವಿಭಾಗಕ್ಕೆ ಭೇಟಿ ನೀಡಿದಾಗ ಶೇಕಡ 4ರಷ್ಟು ಕಮಿಷನ್ 11,500 ರೂ. ನೀಡುವಂತೆ ಕೇಳಿದ್ದಾರೆ. ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದಾಗ 10 ಸಾವಿರ ರೂಪಾಯಿ ನೀಡುವಂತೆ ಕೇಳಿದ್ದಾರೆ ಎಂದು ಗುತ್ತಿಗೆದಾರ ಸುನಿಲ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಗುರುವಾರ ಪಾಲಿಕೆಯ ಕಚೇರಿಯಲ್ಲಿ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ಕಚೇರಿ ಪೊಲೀಸ್ ನಿರೀಕ್ಷಕ ಹೆಚ್.ಎಸ್. ಸುರೇಶ್, ವೀರಬಸಪ್ಪ ಕುಸಲಾಪುರ, ಸಿಬ್ಬಂದಿ ಯೋಗೇಶ್, ಟೀಕಪ್ಪ, ಮಂಜುನಾಥ್, ದೇವರಾಜ್, ಅರುಣ್ ಕುಮಾರ್, ಚನ್ನೇಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.