ಬೆಂಗಳೂರು: ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿ ಪರ ಮತ ಕೇಳಿದ್ದಕ್ಕೆ ಸುಳ್ಯದ ಶಿವಪ್ರಸಾದ್ ವಿರುದ್ಧ ಚುನಾವಣಾ ಅಧಿಕಾರಿ ಹೂಡಿದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮೋದಿಗೆ ಮತ ಹಾಕಿದರೆ ನನಗೆ ಉಡುಗೊರೆ ನೀಡಿದಂತೆ ಎಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಶಿವಪ್ರಸಾದ್ ಉಲ್ಲೇಖಿಸಿದ್ದರು. ಮಾರ್ಚ್ 1ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದು ಮಾರ್ಚ್ 16ರಂದು. ಆದರೂ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದು, ರದ್ದುಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.
ನೀತಿ ಸಂಹಿತೆ ಜಾರಿಗಿಂತ ಮೊದಲು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದರಿಂದ ಸ್ಥಳೀಯ ಕೋರ್ಟ್ ನಲ್ಲಿ ವಿಚಾರಣೆಗೆ ನ್ಯಾಯ ಪೀಠ ತಡೆ ನೀಡಿದೆ. ಅರ್ಜಿದಾರರ ವಿರುದ್ಧ ಪುತ್ತೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ವಿಚಾರಣೆಯ ವೇಳೆ ಅರ್ಜಿದಾರರ ಪರವಾದ ಮಂಡಿಸಿದ ವಕೀಲ ಎಂ. ವಿನೋದ್ ಕುಮಾರ್ ಇದು ಕಾನೂನುಬಾಹಿರವಾಗಿರುವ ಕಾರಣ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.