ಕೊರೋನಾದ ಮೂರನೇ ಅಲೆ ಭಯ ಭಾರತದಲ್ಲಿ ಹೆಚ್ಚಾಗಿದೆ. ನಿಫಾ ವೈರಸ್ ಈಗ ಮತ್ತುಷ್ಟು ನಿದ್ರೆಗೆಡಿಸಿದೆ. ಕೇರಳದಲ್ಲಿ 12 ವರ್ಷದ ಬಾಲಕಿ ನಿಫಾ ವೈರಸ್ ಗೆ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ಎಚ್ಚರಿಕೆ ಘಂಟೆಯಾಗಿದೆ. ಇದ್ರ ರೋಗ ಲಕ್ಷಣಗಳು ಕೊರೊನಾ ಲಕ್ಷಣವನ್ನು ಹೋಲುತ್ತವೆ.
ನಿಫಾ ವೈರಸ್ ಎನ್ಸೆಫಾಲಿಟಿಸ್‌ಗೆ ಸಂಬಂಧಿಸಿದ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಬಾವಲಿಗಳು, ನಾಯಿಗಳು, ಬೆಕ್ಕುಗಳ ಜೊಲ್ಲು ಅಥವಾ ಹನಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ. ಡಬ್ಲ್ಯುಎಸ್ ಪ್ರಕಾರ, ಈ ಅಪಾಯಕಾರಿ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. 1998-1999ರಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಪ್ರಕರಣ ಸಿಂಗಾಪುರ ಮತ್ತು ಮಲೇಷಿಯಾದಲ್ಲಿ ವರದಿಯಾಗಿತ್ತು. 2004 ರಲ್ಲಿ ಬಾಂಗ್ಲಾದೇಶದಲ್ಲಿಯೂ ಇದು ಕಾಣಿಸಿಕೊಂಡಿತ್ತು. 2018 ರಲ್ಲಿ ಕೇರಳದಲ್ಲಿ ಕಂಡುಬಂದಿತ್ತು.
ಭಾರತದಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಬಂದಿದ್ದು 2001 ರಲ್ಲಿ. ಅದರ ನಂತರ ಅದನ್ನು 2007, 2018-19 ಮತ್ತು 2021 ರಲ್ಲೂ ಈ ವೈರಸ್ ಪತ್ತೆಯಾಗಿತ್ತು.
ಸೋಂಕು ಎನ್ಸೆಫಾಲಿಟಿಕ್ ಸಿಂಡ್ರೋಮ್‌ನಿಂದ ಆರಂಭವಾಗುತ್ತದೆ. ಇದರ ಲಕ್ಷಣಗಳು 5 ರಿಂದ 14 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅತಿಯಾದ ಜ್ವರ,. ನಿರಂತರ ತಲೆನೋವು, ಸ್ನಾಯು ನೋವು, ತಲೆಸುತ್ತು, ಆಯಾಸ, ಪ್ರಜ್ಞೆ ಕಳೆದುಕೊಳ್ಳುವುದು, ಗಂಟಲು ನೋವು, ವಾಂತಿ, ಊತ, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಗಳು ಇದ್ರ ಲಕ್ಷಣಗಳಾಗಿವೆ.
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಹೋದಲ್ಲಿ, ವ್ಯಕ್ತಿ 24 ರಿಂದ 48 ಗಂಟೆಗಳ ಕಾಲ ಕೋಮಾಕ್ಕೆ ಹೋಗಬಹುದು.
ತಜ್ಞರ ಪ್ರಕಾರ, ನಿಫಾ ವೈರಸ್ ಕೋವಿಡ್ -19 ಗಿಂತ ನಿಧಾನವಾಗಿ ಹರಡುತ್ತದೆ. ಆದ್ದರಿಂದ ಪ್ರಕರಣಗಳು ಹೆಚ್ಚು ಕಾಣಿಸಲಿಲ್ಲ. ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವಿನಂತಹ ರೋಗಲಕ್ಷಣಗಳೆರಡೂ ನಿಫಾ ವೈರಸ್ ಮತ್ತು ಕೋವಿಡ್‌ನ ಲಕ್ಷಣಗಳನ್ನು ಹೋಲುತ್ತವೆ. ಆದ್ದರಿಂದ ಜಾಗರೂಕರಾಗಿರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ನಿಫಾ ವೈರಸ್ ಗೆ ಯಾವುದೇ ಲಸಿಕೆ, ಔಷಧಿ ಲಭ್ಯವಿಲ್ಲ. ಬೆಂಬಲಿತ ಚಿಕಿತ್ಸೆಯ ಮೂಲಕ ರೋಗಿಯನ್ನು ಗುಣಪಡಿಸಲು ಪ್ರಯತ್ನಿಸಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳು ಮತ್ತು ಆಹಾರ ನೀಡಲಾಗುತ್ತದೆ.
ಆರೋಗ್ಯ ಸಲಹೆಯ ಪ್ರಕಾರ, ಬಾವಲಿಗಳು ತಿಂದ ಹಣ್ಣುಗಳನ್ನು ತಿನ್ನಬೇಡಿ. ಬಾವಿ, ಕೊಳವೆ, ನದಿ ನೀರನ್ನು ನೇರವಾಗಿ ಕುಡಿಯಬೇಡಿ. ಮೇಲಿನ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡುಬಂದರೆ, ಅವರಿಂದ 6 ಅಡಿ ಅಂತರವನ್ನು ಕಾಯ್ದುಕೊಳ್ಳಿ. ವಿಶೇಷವಾಗಿ ಮಕ್ಕಳನ್ನು ಅನಾರೋಗ್ಯದ ವ್ಯಕ್ತಿಯ ಹತ್ತಿರ ಬರಲು ಬಿಡಬೇಡಿ.
ಮಾರುಕಟ್ಟೆಯಿಂದ ತರುವ ಹಣ್ಣುಗಳನ್ನು ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ ಅದ್ರಲ್ಲಿ ತೊಳೆದು ಸೇವನೆ ಮಾಡಿ. ಮನೆಯ ಸ್ವಚ್ಛತೆ, ವಿಶೇಷವಾಗಿ ಬಕೆಟ್ ಮತ್ತು ಶೌಚಾಲಯದ ಚೊಂಬಿನ ಬಗ್ಗೆ ವಿಶೇಷ ಕಾಳಜಿ ವಹಿಸಿ. ವೈರಸ್ ಹರಡುವ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಕೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ. ಪ್ರಾಣಿಗಳ ಮಲ ಹಾಗೂ ಕೊಳಕನ್ನು ಮುಟ್ಟಬೇಡಿ. ಮನೆಯಿಂದ ಹೊರಗೆ ಹೋಗುವಾಗ ಫೇಸ್ ಮಾಸ್ಕ್ ಧರಿಸಿ. ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ.