alex Certify ಬಿಸಿಯೂಟದ ಸಾಂಬಾರ್ ಗೆ ವಿದ್ಯಾರ್ಥಿನಿ ಬಿದ್ದ ಪ್ರಕರಣ : ಮುಖ್ಯ ಶಿಕ್ಷಕಿ ಸೇರಿ ಮೂವರು ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಯೂಟದ ಸಾಂಬಾರ್ ಗೆ ವಿದ್ಯಾರ್ಥಿನಿ ಬಿದ್ದ ಪ್ರಕರಣ : ಮುಖ್ಯ ಶಿಕ್ಷಕಿ ಸೇರಿ ಮೂವರು ಸಸ್ಪೆಂಡ್

ಕಲಬುರಗಿ : ಅಫಜಲಪೂರ ತಾಲೂಕಿನ ಚಿಣಮಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಬಿಸಿಯೂಟ ಬಡಿಸುವ ಸಂದರ್ಭದಲ್ಲಿ ಸಾಂಬಾರಗೆ ಬಿದ್ದ ಪ್ರಕರಣದಲ್ಲಿ ಸುರಕ್ಷಿತವಾಗಿ ಬಿಸಿಯೂಟ ವಿತರಿಸದೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಆರೋಪದ ಮೇರೆಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಲಾಲಬಿ ನದಾಫ್ ಮತ್ತು ಸಹ ಶಿಕ್ಷಕ ರಾಜು ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಹಾಗೂ ಮುಖ್ಯ ಅಡುಗೆಯವರಾದ ಕಸ್ತೂರಿಬಾಯಿ ಎಂ.ತಳಕೇರಿ ಅವರನ್ನು ವಜಾಗೊಳಿಸಿ ಕ್ರಮವಾಗಿ ಡಿ.ಡಿ.ಪಿ.ಐ ಮತ್ತು ತಾಲೂಕ ಪಂಚಾಯತ್ ಇ.ಓ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಸುರಕ್ಷಿತ ಬಿಸಿಯೂಟ ವಿತರಣೆ ಮಾಡದಿರುವುದು ಗಂಭೀರ ಕರ್ತವ್ಯ ಲೋಪವಾಗಿದೆ. ಈ ಸಂಬಂಧ ಅಫಜಲಪೂರ ಬಿ.ಇ.ಓ ಅವರ ವರದಿ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ಸೇವಾ ನಿಯಮಾವಳಿ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) 1957ರ ನಿಯಮ 10(1)ರ ಪ್ರಕಾರ ಮುಖ್ಯ ಶಿಕ್ಷಕಿ ಲಾಲಬಿ ನದಾಫ್ ಮತ್ತು ಸಹ ಶಿಕ್ಷಕ ರಾಜು ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ ಅವರು ಆದೇಶ ಹೊರಡಿಸಿದ್ದಾರೆ.

ಅಮಾನತ್ತಿನ ಅವಧಿಯಲ್ಲಿ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 98(ಎ) ಪ್ರಕಾರ ಜೀವನಾಂಶ, ಭತ್ಯೆ ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಖ್ಯ ಅಡುಗೆಯವರ ವಜಾ:

ಪ್ರಕರಣದಲ್ಲಿ ಬಿಸಿಯೂಟ ವಿತರಣೆಗೆ ವ್ಯವಸ್ಥಿತ ಸುರಕ್ಷತಾ ಕ್ರಮ ಕೈಗೊಳ್ಳದೆ ಮತ್ತು ಗುರುವಾರ ಅನಧಿಕೃತ ಗೈರು ಹಾಜರಾದ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯದ ಅರೋಪದ ಮೇರೆಗೆ ಶಾಲೆಯ ಮುಖ್ಯ ಅಡುಗೆಯವರಾದ ಕಸ್ತೂರಿಬಾಯಿ ಎಂ. ತಳಕೇರಿ ಅವರನ್ನು ಸಹ ತಕ್ಷಣದಿಂದಲೆ ಜಾರಿಗೆ ಬರುವಂತೆ ವಜಾಗೊಳಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ ಅವರು ಆದೇಶ ಹೊರಡಿಸಿದ್ದಾರೆ.

ಗುರುವಾರ ಮಧ್ಯಾಹ್ನ ಬಿಸಿಯೂಟ ವಿತರಣೆ ಸಂದರ್ಭದಲ್ಲಿ ಶಾಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿನಿಯೋರ್ವಳು ಬಿಸಿ ಊಟ ಬಡಿಸುವ ಪಾತ್ರೆಗೆ ಬಿದ್ದು ಸುಟ್ಟ ಗಾಯವಾಗಿರುವ ಬಗ್ಗೆ ವರದಿಯಾಗಿತ್ತು. ತಕ್ಷಣವೆ ವಿದ್ಯಾರ್ಥಿನಿಯನ್ನು ಚೌಡಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೋಷಕರ ಕೋರಿಕೆ ಮೇರೆಗೆ ವಿದ್ಯಾರ್ಥಿನಿಯನ್ನು ಶುಕ್ರವಾರ ಬೆಳಿಗ್ಗೆಯೆ ಜಿಮ್ಸ್ ಆಸ್ಪತ್ರೆಯಿಂದ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಆರೋಗ್ಯ ಸ್ಥಿತಿ ಕ್ಷೇಮವಾಗಿದೆ.

ಬೆಳಿಗ್ಗೆ ಭರವಸೆ,ಸಂಜೆ ಶಿಸ್ತು ಕ್ರಮ:

ಪ್ರಕರಣ ಸಂಬಂಧ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ವಿದ್ಯಾರ್ಥಿನಿಯ ಪೋಷಕರ ಜೊತೆ ಶುಕ್ರವಾರ ಬೆಳಿಗ್ಗೆ ಮಾತನಾಡಿ, ವಿದ್ಯಾರ್ಥಿನಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ಬಿ.ಇ.ಓ, ತಾಲೂಕಾ ಆರೋಗ್ಯ ಅಧಿಕಾರಿಗಳು, ಬಿಸಿಯೂಟ ಅಧಿಕಾರಿಗಳು ಅಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿ ಆರೋಗ್ಯ ಪರಿಶೀಲಿಸಿದಲ್ಲದೆ ನಿಗಾ ವಹಿಸಿದ್ದಾರೆ. ಯಾವುದೇ ಆತಂಕ ಪಡಬೇಕಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಶುಕ್ರವಾರ ಬೆಳಿಗ್ಗೆಯ ಭರವಸೆ ನೀಡಿದ್ದರು. ಅದರಂತೆ ಸಂಜೆ ಶಿಕ್ಷಕರ ಅಮಾನತ್ತು ಮತ್ತು ಅಡುಗೆಯವರ ವಜಾ ಆದೇಶ ಹೊರಬಿದ್ದಿದೆ. ಏತನ್ಮಧ್ಯೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಬಿಸಿಯೂಟ ಯೋಜನೆಯ ನಿರ್ದೇಶಕರು ಪ್ರಕರಣ ಸಂಬಂಧ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಗೆ ನಿರ್ದೇಶನ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...