ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಎಕ್ಸ್ ನಲ್ಲಿ(ಹಿಂದಿನ ಟ್ವಿಟರ್) ವಿಡಿಯೋ ಪೋಸ್ಟ್ ಮಾಡಿ ಧರ್ಮದ ಆಧಾರದಲ್ಲಿ ಮತ ಯಾಚನೆ ಮಾಡಿದ್ದಕ್ಕಾಗಿ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ.
ಅಯೋಧ್ಯೆಯ ಬಾಲರಾಮನ ಹಣೆಗೆ ಸೂರ್ಯ ಸ್ಪರ್ಶಿಸುವ ವಿಡಿಯೋ ಅಪ್ಲೋಡ್ ಮಾಡಿದ್ದ ತೇಜಸ್ವಿ ಸೂರ್ಯ, ರಾಮನವಮಿಯಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ಮೇಲೆ ಸೂರ್ಯ ತಿಲಕ ವೀಕ್ಷಿಸಲು ನಮ್ಮ ಪೀಳಿಗೆ ಆಶೀರ್ವದಿಸಲ್ಪಟ್ಟಿದೆ. 500 ವರ್ಷಗಳ ಕಾಯುವಿಕೆ, ಕೋಟಿಗಟ್ಟಲೆ ಭಾರತೀಯರ ಆಶಯವನ್ನು ಪ್ರಧಾನಿ ಈಡೇರಿಸಿದ್ದಾರೆ. ಭಾರತೀಯತೆ ಉಳಿಸಲು ಬಿಜೆಪಿಗೆ ಮತ ನೀಡಿ ಎಂದು ಪೋಸ್ಟ್ ಹಾಕಿದ್ದರು.
1996 ರಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2019 ರ ಚುನಾವಣೆಯಲ್ಲಿ ಸೂರ್ಯ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.