ಬೇರೆಯವರಿಗೆ ಸೇರಿದ ಆಸ್ತಿಯ ಉಸ್ತುವಾರಿ ವಹಿಸಿದ ಅಥವಾ ನೌಕರನಾಗಿ ಸೇವೆ ಸಲ್ಲಿಸಿದ ಮಾತ್ರಕ್ಕೆ ಅವರಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಅವರು ಎಷ್ಟೇ ದೀರ್ಘಕಾಲದವರೆಗೆ ಸೇವೆ ಸಲ್ಲಿಸಿದ್ದರೂ ಸಹ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ.
ಮಾಲೀಕ ಸೂಚನೆ ನೀಡುತ್ತಿದ್ದಂತೆಯೇ ಆ ಸ್ಥಳದಿಂದ ಜಾಗ ಖಾಲಿ ಮಾಡಬೇಕು ಎಂದು ಮಹತ್ವದ ತೀರ್ಪನ್ನು ನೀಡಿದೆ.
ಆಸ್ತಿಯ ಮೇಲೆ ಸೇವಕನ ಹಕ್ಕನ್ನು ಅನುಮತಿಸಿದ್ದ ಸೆಷನ್ಸ್ ಕೋರ್ಟ್ ಹಾಗೂ ಕೊಲ್ಕತ್ತಾ ಹೈಕೋರ್ಟ್ ತೀರ್ಪನ್ನು ಈ ಮೂಲಕ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ನ್ಯಾ. ಓಕಾ ನೇತೃತ್ವದ ನ್ಯಾಯಪೀಠ ಮೂರು ತಿಂಗಳ ಒಳಗಾಗಿ ಆಸ್ತಿ ಖಾಲಿ ಮಾಡುವಂತೆ ಹಾಗೂ ಮಾಲೀಕರಿಗೆ ಆಸ್ತಿಯನ್ನು ತಲುಪಿಸುವಂತೆ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದಲ್ಲಿ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದೆ.
ಸುಪ್ರೀಂಕೋರ್ಟ್ ಇದರ ಜೊತೆಯಲ್ಲಿ ಸಿಪಿಸಿಯ ಆದೇಶ 7 ಹಾಗೂ ನಿಯಮ 11ರ ಅಡಿಯಲ್ಲಿ ಮಾಲೀಕರ ಅರ್ಜಿಯನ್ನು ಸ್ವೀಕರಿಸಿದೆ. ಹಾಗೂ ನೌಕರನಿಗೆ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕು ಇರಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ನೌಕರ ಅಥವಾ ಕೇರ್ ಟೇಕರ್ ಎಡ್ವರ್ಸ್ ಪಜೇಷನ್ನ ಮೂಲಕವೂ ವಾದ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಯಾವುದೇ ಆದಾಯ ಪಾವತಿ ಮಾಡಿಲ್ಲ ಎಂಬ ಕಾರಣದ ಅಡಿಯಲ್ಲೂ ಈ ಆಸ್ತಿಯ ಮೇಲೆ ಅಧಿಕಾರ ಹೊಂದಲು ಮಾಲೀಕನನ್ನು ಹೊರತುಪಡಿಸಿ ನೌಕರನಿಂದ ಸಾಧ್ಯವೇ ಇಲ್ಲ ಎಂದು ಹೇಳಿದೆ.
ಏನಿದು ಪ್ರಕರಣ..?
ಅನೇಕ ವರ್ಷಗಳಿಂದ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯು ಮಾಲೀಕನಿಂದ ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಇಚ್ಛಿಸಿದನು. ತಾನು ಬಹಳ ಸಮಯದಿಂದ ಈ ಆಸ್ತಿಯಲ್ಲಿ ವಾಸಿಸುತ್ತಿರುವುದರಿಂದ ಇದು ನನಗೇ ಸೇರಬೇಕು ಎನ್ನುವುದು ನೌಕರನ ವಾದವಾಗಿತ್ತು. ಇದಕ್ಕಾಗಿ ನೌಕರನು ಕೋರ್ಟ್ ಮೆಟ್ಟಿಲೇರುವ ಮೂಲಕ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಹೊರಟಿದ್ದನ್ನು. ಆದರೆ ಈ ಎಲ್ಲಾ ವಾದಗಳನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ಮಾಲೀಕನೇ ಆಸ್ತಿಯ ಏಕೈಕ ಹಕ್ಕುದಾರ ಎಂದು ಹೇಳಿದೆ.