ಮುಖದ ತ್ವಚೆಯ ಕಾಳಜಿಗೆ ನಾವು ಎಷ್ಟು ಮಹತ್ವ ಕೊಡುತ್ತೇವೋ ಅಷ್ಟೇ ಮಹತ್ವವನ್ನು ಕತ್ತಿನ ಭಾಗದ ತ್ವಚೆಗೂ ನೀಡಬೇಕಾಗುತ್ತದೆ. ಯಾವುದೇ ಪ್ರಕಾರದ ಫೇಸ್ ಪ್ಯಾಕ್ ಬಳಸುವಾಗ ಅದನ್ನು ಕೇವಲ ಮುಖದ ಭಾಗಕ್ಕೆ ಮಾತ್ರ ಮೀಸಲಿಡದಿರಿ. ಕತ್ತಿಗೂ ಹಚ್ಚುವುದನ್ನು ಕಲಿಯಿರಿ.
ಪ್ರತಿದಿನ ನೀವು ಮಾಯಿಸ್ಚರೈಸರ್ ಅಥವಾ ಲೋಷನ್ ಗಳನ್ನು ಹಚ್ಚಿಕೊಳ್ಳುವಾಗ ನಿಮ್ಮ ಮುಖ, ಕೈ ಕಾಲುಗಳೊಂದಿಗೆ ಕುತ್ತಿಗೆಗೂ ಹಚ್ಚಿಕೊಳ್ಳಲು ಮರೆಯದಿರಿ. ಇದರಿಂದ ಕುತ್ತಿಗೆಯಲ್ಲಿ ಅಕಾಲಿಕವಾಗಿ ಕಾಣಿಸಿಕೊಳ್ಳುವ ಗೆರೆಗಳನ್ನು ತಡೆಗಟ್ಟಬಹುದು.
ಸನ್ ಸ್ಕ್ರೀನ್ ಲೋಷನ್ ಅನ್ನು ಕುತ್ತಿಗೆಗೂ ಹಚ್ಚಿಕೊಳ್ಳುವುದರಿಂದ ಸೂರ್ಯನ ಕಿರಣಗಳು ನೇರವಾಗಿ ಕುತ್ತಿಗೆಯ ಚರ್ಮಕ್ಕೆ ಬಿದ್ದು ಆ ಭಾಗ ಕಪ್ಪಾಗುವುದನ್ನು ತಡೆಗಟ್ಟಬಹುದು. ಮುಖ ತೊಳೆಯುವಾಗ, ನಿತ್ಯ ಮಲಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದಾಕ್ಷಣ ಮುಖದೊಂದಿಗೆ ಕುತ್ತಿಗೆಯ ಭಾಗವನ್ನು ತೊಳೆಯಲು ಮರೆಯದಿರಿ.
ಅಲೋವೇರಾ, ಲಿಂಬೆ ಹಣ್ಣಿನ ಅರ್ಧ ಭಾಗದಿಂದ ಕುತ್ತಿಗೆಯ ಹಿಂಭಾಗಕ್ಕೆ ಮಸಾಜ್ ಮಾಡುವುದರಿಂದ ಅಲ್ಲಿ ಕಪ್ಪಾಗಿ ಉಳಿದ ಕಲೆಯನ್ನು ದೂರಮಾಡಬಹುದು.