ಧರ್ಮಗ್ರಂಥಗಳು, ಧಾರ್ಮಿಕ ವಿಚಾರವುಳ್ಳ ಪುಸ್ತಕಗಳು ಬದುಕಿಗೆ ಶಿಕ್ಷಣ ಮತ್ತು ಮೌಲ್ಯವನ್ನು ನೀಡುತ್ತವೆ. ಮನಸು ಪರಿಶುದ್ಧವಾಗಿದ್ದು ಬುದ್ಧಿಯನ್ನ ನಿಗ್ರಹದಲ್ಲಿಟ್ಟುಕೊಂಡು ಉತ್ತಮ ಮಾರ್ಗದಲ್ಲಿ ನಡೆಯಲು ಹಲವರು ಧಾರ್ಮಿಕ ಪುಸ್ತಕಗಳನ್ನು ಓದುತ್ತಾರೆ. ಇಂತಹ ಪುಸ್ತಕಗಳಿಗೆ ಮನುಷ್ಯನ ಮನಸ್ಸನ್ನು ಗುಣಪಡಿಸುವ ಶಕ್ತಿ ಇದೆ ಎಂದು ನಂಬಲಾಗಿದೆ.
ಇಂತಹ ಪುಸ್ತಕಗಳನ್ನು ವಿಜ್ಞಾನ ತಜ್ಞರು, ವೈದ್ಯರು ಓದುವುದಾಗಲೀ ಅಥವಾ ಮತ್ತೊಬ್ಬರಿಗೆ ರೆಫರ್ ಮಾಡುವುದಾಗಲೀ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಉತ್ತರಪ್ರದೇಶದ ಕಾನ್ಪುರದ ಹೃದ್ರೋಗ ತಜ್ಞ ಡಾ.ನೀರಜ್ ಕುಮಾರ್ ಅವರು ತಮ್ಮ ಬಳಿ ಬರುವ ರೋಗಿಗಳಿಗೆ ಧಾರ್ಮಿಕ ಪುಸ್ತಕಗಳನ್ನು ಓದಲು ನೀಡುತ್ತಾರೆ. ಇದು ರೋಗಿಗಳಿಗೆ ಸಂತೋಷವನ್ನು ನೀಡುತ್ತದೆ ಮತ್ತು ಅವರ ನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ಪತ್ರಿಕೆಯೊಂದಕ್ಕೆ ಅವರು ತಿಳಿಸಿದ್ದಾರೆ. ಅವರು ತಮ್ಮ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮತ್ತು ದೀರ್ಘಾವಧಿಯ ಚಿಕಿತ್ಸೆಯ ಮೊದಲು ಭಗವದ್ಗೀತೆ, ಹನುಮಾನ್ ಚಾಲೀಸಾ, ರಾಮಾಯಣ ಮುಂತಾದ ಪುಸ್ತಕಗಳನ್ನು ಓದಲು ನೀಡುವುದಾಗಿ ಹೇಳಿದ್ದಾರೆ.
ಚಿಕಿತ್ಸೆಯ ಕಡ್ಡಾಯ ಭಾಗವಾಗಿ ಪುಸ್ತಕಗಳನ್ನು ನೀಡುವ ಅಭ್ಯಾಸ ಡಾ. ನೀರಜ್ ಕುಮಾರ್ ಗೆ ಇದೆ. ಇದಕ್ಕೆ ಪ್ರತಿಕ್ರಿಯಿಸಿದ ನೆಟಿಜನ್‌ಗಳು ಈ ಬಗ್ಗೆ ಮಿಶ್ರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಧಾರ್ಮಿಕ ಪುಸ್ತಕಗಳನ್ನು ಓದಲು ಜನರನ್ನು ಪ್ರೋತ್ಸಾಹಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುವ ಮೂಲಕ ಹೆಚ್ಚಿನವರು ಈ ಕ್ರಮವನ್ನು ಸ್ವಾಗತಿಸಿದರೆ, ಇತರರು ಇದೊಂದು ಉತ್ತಮ ವ್ಯಾಪಾರ, ಪುಸ್ತಕದ ಬೆಲೆಯನ್ನೂ ನಿಮ್ಮ ಬಿಲ್ ಗೆ ಸೇರಿಸಿಕೊಳ್ಳಬಹುದೆಂದು ಟೀಕಿಸಿದ್ದಾರೆ.