ಹಾವೇರಿ: ಹಾವೇರಿ ಜಿಲ್ಲೆ ಸಾತೇನಹಳ್ಳಿ ಸಮೀಪದ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರ ಮೃತದೇಹ ಪತ್ತೆಯಾಗಿವೆ.
ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಮೂವರು ಬಲಿಯಾಗಿದ್ದಾರೆ. ಭಾರಿ ಪ್ರಮಾಣದ ಸ್ಪೋಟ, ಬೆಂಕಿ ಜ್ವಾಲೆಯಲ್ಲಿ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. 5 ಗಂಟೆಗಳ ಕಾಲ 8 ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ದ್ಯಾಮಪ್ಪ ಓಲೇಕಾರ, ರಮೇಶ ಬಾರ್ಕಿ, ಶಿವಲಿಂಗ ಅಕ್ಕಿ ಮೃತದೇಹಗಳು ಪತ್ತೆಯಾಗಿವೆ. ಮೃತರು ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಪಟಾಕಿ ಅಂಗಡಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬರ ಶವ ಇರುವ ಶಂಕೆ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಗಣೇಶ ಹಬ್ಬ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಲಾಗಿತ್ತು. ಪಟಾಕಿ ಸಂಗ್ರಹಿಸಿಡಲಾಗಿದ್ದ ಗೋದಾಮಿನ ಬಳಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದು, ಅದರ ಕಿಡಿ ಸಿಡಿದು ಪಟಾಕಿಗೆ ಬೆಂಕಿ ತಗುಲಿರಬಹುದೆಂದು ಹೇಳಲಾಗಿದೆ. ಸುಮಾರು 1 ಕೋಟಿಗೂ ಅಧಿಕ ನಷ್ಟವಾಗಿದೆ.