
ಬೆಳಗಾವಿ: ಕಾರು ಅಡ್ಡಗಟ್ಟಿ ನಿಲ್ಲಿಸಿ ಪಿಸ್ತೂಲ್ ತೋರಿಸಿ 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ದರೋಡೆಕೋರರ ಗ್ಯಾಂಗ್ ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಹೊರಟಿದ್ದ ಇನೋವಾ ಕಾರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡ, ಬಳಿಕ ಕಾರು ಅಡ್ಡಗಟ್ಟಿ ನಿಲ್ಲಿಸಿದೆ. ಪಿಸ್ತೂಲು ತೋರಿಸಿ ಕಾರಿನಲ್ಲಿದ್ದವರನ್ನು ಕೆಳಗಿಳಿಸಿ ಕಾರಿನಲ್ಲಿದ್ದ 75 ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದೆ.
ಸೂರಜ್ ವನಮಾನೆ ಎಂಬುವವರು ಕೊಲ್ಲಾಪುರದಲ್ಲಿ ಚಿನ್ನದ ವ್ಯಾಪಾರ ಮುಗಿಸಿಕೊಂಡು ಚಾಲಕನೊಂದಿಗೆ ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ನಡೆದಿದೆ.
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.