ಬೆಂಗಳೂರು: ಕಾರು ಬಾಡಿಗೆ ಪಡೆದು ಪ್ರವಾಕ್ಕೆ ತೆರಳಿ ವಾಪಾಸ್ ಆಗಿದ್ದ ಐವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಹೆಚ್ಚಿನ ಹಣ ವಸೂಲಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾಲೀಕ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರಾಲೇಔಟ್ ಪೊಲೀಸರು ನಿತಿನ್, ಶಶಾಂಕ್, ವಿನೋದ್ ಎಂಬಾತನನ್ನು ಬಂಧಿಸಿದ್ದಾರೆ. ಕಳೆದ ವಾರ ಐವರು ವಿದ್ಯಾರ್ಥಿಗಳು ಬೆಂಗಳೂನಿಂದ ಕಾರು ಬಾಡಿಗೆ ಪಡೆದು ಮಡಿಕೇರಿಗೆ ಹೋಗಿದ್ದರು. ವಿನೋದ್ ಎಂಬಾತನನ್ನು ಸಂಪರ್ಕಿಸಿ ಕಾರು ಬಾಡಿಗೆಗೆ ಪಡೆದಿದ್ದರು. ವಾಪಾಸ್ ಕಾರು ನೀಡಲು ಬಂದಾಗ ವಿನೋದ್ ಕಚೇರಿಗೆ ಕರೆದೊಯ್ದು ಕ್ಯಾತೆ ತೆಗೆದಿದ್ದಾನೆ.
ಇಬ್ಬರು ವಿದ್ಯಾರ್ಥಿಗಳನ್ನು ನಾಗರಬಾವಿ ಕಚೇರಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವಿನೋದ್, ನಿತಿನ್, ಶಶಾಂಕ್ ಸೇರಿ ವಿದ್ಯಾರ್ಥಿಗಳ ಜೊತೆ ಗಲಾಟೆ ಮಾಡಿದ್ದಾರೆ. ನೀವು ಗಂಟೆಗೆ 100ಕಿ.ಮೀ ವೇಗದ ಮಿತಿ 120 ಬಾರಿ ಮೀರಿದ್ದೀರಿ. ಅದಕ್ಕಾಗಿ 1.20 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಗದರಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಲ್ಲದೇ ವಿದ್ಯಾರ್ಥಿಗಳನ್ನು ಮೊಬೈಲ್ ಅಂಗಡಿಗೆ ಕರೆದೊಯ್ದು QR ಕೋಡ್ ಗೆ 50 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಅವರ ಬಳಿ ಇದ್ದ ಲ್ಯಾಪ್ ಟಾಪ್ ವಶಕ್ಕೆ ಪಡೆದು ಮಧ್ಯರಾತ್ರಿ ವಿದ್ಯಾರ್ಥಿಗಳನ್ನು ಅವರವರ ಮನೆ ಬಳಿ ಬಿಟ್ಟಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಗಳು ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.