ಬೆಂಗಳೂರು: ಕೆಲಸ ಕೊಡಿಸುವುದಾಗಿ ಗೆಳತಿಯನ್ನು ನಂಬಿಸಿ ಆಕೆಯನ್ನು ಕಾರ್ ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ನೆಲಮಂಗಲ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬಿದರಕಲ್ಲು ನಿವಾಸಿ ಹರ್ಷ ಗೌಡ(27) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಈತ ಫ್ಯಾಶನ್ ಡಿಸೈನರ್ ಆಗಿರುವ ಯುವತಿಗೆ ಹೆಚ್ಚಿನ ವೇತನದ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ.
ಜನವರಿ 16 ರಂದು ಸ್ನೇಹಿತರಿಗೆ ಹೇಳಿ ಕೆಲಸ ಕೊಡಿಸುವುದಾಗಿ ರೆಸ್ಟೋರೆಂಟ್ ವೊಂದಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ತನ್ನ ಐಷಾರಾಮಿ ಕಾರ್ ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ತನಗೆ ನಿರಂತರವಾಗಿ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಜನವರಿ 19 ರಂದು ಯುವತಿ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆನ್ನಲಾಗಿದೆ.