ಬೆಂಗಳೂರು: ಕಾರ್ ಪೂಲಿಂಗ್ ವಿವಾದ ಹಾಗೂ ಆಟೋ ಚಾಲಕರ ಮೇಲೆ ಹಲ್ಲೆ, ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಕಾರ್ಪೊರೇಟರ್, ಸಂಸದ ತೇಜಸ್ವಿ ಸೂರ್ಯ ಆಪ್ತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕಾರ್ ಪೂಲಿಂಗ್ ಗೆ ಅನುಮತಿ ನೀಡುವಂತೆ ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಖಾಸಗಿ ಸಾರಿಗೆ ಸಂಘಟನೆಗಳು ಧಿಕ್ಕಾರದ ಪೋಸ್ಟರ್ ಹಾಕಿ ಅಭಿಯಾನ ಆರಂಭಿಸಿದ್ದರು.
ಇದರ ಭಾಗವಾಗಿ ತೇಜಸ್ವಿ ಸೂರ್ಯ ವಿರುದ್ಧ ಧಿಕ್ಕಾರ ಧಿಕ್ಕಾರ ಪೋಸ್ಟರ್ ಅಂಟಿಸಲಾಗಿತ್ತು. ಇದನ್ನು ಕಂಡ ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ಹಾಗೂ ಬೆಂಬಲಿಗರು ಆಟೋ ಚಾಲಕರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಆಟೋ ಚಾಲಕರನ್ನು ಕರೆದು ಇನ್ಮುಂದೆ ನಮ್ಮ ಏರಿಯಾದಲ್ಲಿ ಕಂಡರೆ ಕತ್ತರಿಸಿ ಹಾಕುವುದಾಗಿ ಸಂಗಾತಿ ವೆಂಕಟೇಶ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.