ಮಂಗಳೂರು: ಕಾರ್ ಒಳಗೆ ಮಗು ಮಲಗಿರುವ ಸಂದರ್ಭದಲ್ಲಿ ಟೋಯಿಂಗ್ ಮಾಡಿದ ಘಟನೆ ಗುರುವಾರ ಸಂಜೆ ಮಂಗಳೂರಿನಲ್ಲಿ ನಡೆದಿದೆ.
ಕದ್ರಿ ಸಮೀಪ ಫುಟ್ ಪಾತ್ ನಲ್ಲಿ ಕಾರ್ ನಿಲ್ಲಿಸಿ ಮಹಿಳೆ ಶಾಪಿಂಗ್ ಹೋಗಿದ್ದಾರೆ. ಕಾರ್ ನಲ್ಲಿ 5 ವರ್ಷದ ಮಗು ಮಲಗಿದ್ದು, ಮಹಿಳೆ ಮೊಬೈಲ್ ಬಿಟ್ಟು ಹೋಗಿರುವುದನ್ನು ಗಮನಿಸಿದ ಚಾಲಕ ಕಾರ್ ಲಾಕ್ ಮಾಡಿ ಮೊಬೈಲ್ ಕೊಡಲು ಮಹಿಳೆ ಬಳಿಗೆ ತೆರಳಿದ್ದಾನೆ.
ಈ ವೇಳೆ ಅಲ್ಲಿಗೆ ಬಂದ ಪೊಲೀಸರ ಟೋಯಿಂಗ್ ವಾಹನ ಸಿಬ್ಬಂದಿ ಫುಟ್ ಪಾತ್ ನಲ್ಲಿ ನಿಂತಿರುವ ಕಾರ್ ತೆಗೆಯಲು ಸೂಚಿಸಿದ್ದಾರೆ. ಆದರೆ, ಯಾರೂ ಬಾರದ ಕಾರಣ ಕಾರ್ ಅನ್ನು ಪೊಲೀಸ್ ಠಾಣೆಯ ತೆಗೆದುಕೊಂಡು ಹೋಗಲಾಗಿದೆ.
ಶಾಪಿಂಗ್ ನಿಂದ ವಾಪಸ್ ಬಂದ ಮಹಿಳೆ ಮತ್ತು ಕಾರ್ ಚಾಲಕನಿಗೆ ಸ್ಥಳೀಯರು ಟೋಯಿಂಗ್ ಬಗ್ಗೆ ತಿಳಿಸಿದ್ದಾರೆ ಕೂಡಲೇ ಕದ್ರಿ ಠಾಣೆಗೆ ತೆರಳಿದಾಗ ವಾಹನದೊಳಗೆ ಮಗು ಮಲಗಿರುವುದು ಗೊತ್ತಾಗಿದೆ. ಕಾರ್ ಲಾಕ್ ಮಾಡಿ ಟಿಂಟ್ ಹಾಕಿದ್ದ ಕಾರಣ ಮಗು ಮಲಗಿರುವುದು ಪೊಲೀಸರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಕೊನೆಗೆ ಟಿಂಟ್, ನೋ ಪಾರ್ಕಿಂಗ್ ಕೇಸ್ ದಾಖಲಿಸಿ ಕಾರ್ ಬಿಟ್ಟು ಕಳಿಸಲಾಗಿದೆ.