ಬೆಂಗಳೂರು: ನಿಂತಿದ್ದ ಕಾರುಗಳ ಗಾಜುಗಳನ್ನು ಒಡೆದು ಹಗಲಲ್ಲೇ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ನ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರಿನ ಗಾಜುಗಳನ್ನು ಒಡೆದು ಕಾರಿನಲ್ಲಿದ್ದ ಬ್ಯಾಗ್, ಲ್ಯಾಪ್ ಟಾಪ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಆರೋಪಿಗಳು ಎಗರಿಸುತ್ತಿದ್ದರು. ಇಂದಿರಾನಗರದಲ್ಲಿ ಪಾರ್ಕ್ ಮಾಡಿದ್ದ ಕಾರಿನ ಗಾಜು ಒಡೆದು ಬ್ಯಾಗ್ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಕಳ್ಳರ ಗ್ಯಾಂಗ್ ಪತ್ತೆ ಮಾಡಿದ ಪೊಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುರಳಿ, ಸೆಂಥಿಲ್, ಮೂರ್ತಿ ಹಾಗೂ ಕದ್ದ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಜಾನ್ ಬಂಧಿತ ಆರೋಪಿಗಳು. ಬಂಧಿತರು ತಮಿಳುನಾಡಿನ ತಿರುಚನಾಪಳ್ಳಿ ಮೂಲದವರು ಎಂದು ತಿಳಿದುಬಂದಿದೆ. ಆರೋಪಿಗಳಿಂದ ಲ್ಯಾಪ್ ಟಾಪ್ ಸಹಿತ 5.85 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ನಗರದಲ್ಲಿ ಸ್ಥಿತಿವಂತ ವ್ಯಕ್ತಿಗಳ ಜಾಗಗಳನ್ನು ಟಾರ್ಗೆಟ್ ಮಾಡಿ ಐಷಾರಾಮಿ ಕಾರುಗಳನ್ನೇ ನೋಡಿ ಕಳ್ಳತನ ಮಾಡುತ್ತಿದ್ದರು.