ಅಸಂಖ್ಯಾತ ಸಂದರ್ಶನಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಅಸಾಧ್ಯ ಎನ್ನುವ ಸಂದರ್ಶನ ನಡೆದಿದೆ. ಇಂಗ್ಲೆಂಡ್‌ನಲ್ಲಿ ನಾಲ್ವರು ಉದ್ಯೋಗಾಕಾಂಕ್ಷಿಗಳು ಹೈ-ಸ್ಪೀಡ್ BMW ನಲ್ಲಿ ಟ್ರ್ಯಾಕ್‌ನ ಸುತ್ತಲೂ ಓಡುತ್ತಿರುವಾಗ ಭಯಾನಕ ಸಂದರ್ಶನವನ್ನು ಎದುರಿಸಿದ್ದಾರೆ.
ನಾಲ್ಕು ಜನರು ಬಿಗ್ ಮೋಟಾರಿಂಗ್ ವರ್ಲ್ಡ್ ಕಾರ್ ಡೀಲರ್‌ಶಿಪ್‌ನಲ್ಲಿ ಮಾರಾಟದ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅವರನ್ನು ಜನಪ್ರಿಯ ಯುಟ್ಯೂಬರ್ ಸಿಡ್ ನಾರ್ತ್ ಅವರು ಲಿಂಕನ್‌ಶೈರ್‌ನ ಪ್ರಸಿದ್ಧ ಕಾಲ್ಡ್‌ವೆಲ್ ಪಾರ್ಕ್‌ಗೆ ಕರೆದುಕೊಂಡು ಹೋದರು. ಅಲ್ಲಿ ಕಪ್ಪು ಬಣ್ಣದ BMW M5 ನಲ್ಲಿ ಸಂದರ್ಶನ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ನೇಮಕಾತಿ ಮಾಡುವವರ ಪಕ್ಕದಲ್ಲಿ ಅವರು ಜೋರಾಗಿ ಕೂಗುತ್ತಾ ಎರಡು ಸುತ್ತುಗಳ ಸಂದರ್ಶನ ಮುಗಿಸಿದ್ದಾರೆ. ಕಾರು ಕೆಲವೊಮ್ಮೆ ಗಂಟೆಗೆ 180 ಕಿಲೋಮೀಟರ್‌ಗಳಷ್ಟು ಹೆಚ್ಚಿನ ವೇಗದಲ್ಲಿ ಚಲಿಸುತ್ತಿತ್ತು. ಇದನ್ನು ನೋಡಿ ನೆಟ್ಟಿಗರು ಸುಸ್ತಾಗಿ ಹೋಗಿದ್ದಾರೆ. ಈ ಡೀಲರ್‌ಶಿಪ್‌ನಲ್ಲಿ ಹಲವಾರು ಸವಾಲುಗಳು ಬರುತ್ತವೆ, ಅದನ್ನು ಹೇಗೆ ಎದುರಿಸುತ್ತಾರೆ ಎನ್ನುವ ಕಾರಣಕ್ಕೆ ಈ ರೀತಿ ಸಂದರ್ಶನ ನಡೆಸಲಾಗಿದೆ ಎಂದು ಸಂದರ್ಶಕರು ಸಮಜಾಯಿಷಿ ನೀಡಿದ್ದಾರೆ.