ಬೆಳಗಾವಿ: ಕಾರ್ಮಿಕರ ಸಾಮಾಜಿಕ ಭದ್ರತೆ ನಿಧಿಗಾಗಿ ದ್ವಿಚಕ್ರವಾಹನ, ಸಾರಿಗೇತರ ಮೋಟಾರ್ ಕಾರುಗಳ ನೋಂದಣಿ ವೇಳೆ ತಲಾ 500 ರೂಪಾಯಿ ಮತ್ತು 1 ಸಾವಿರ ರೂಪಾಯಿ ಉಪಕರ ವಿಧಿಸುವ ವಿಧೇಯಕಕ್ಕೆ ಸುವರ್ಣ ಸೌಧದಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿದೆ.
ರಾಜ್ಯ ಮೋಟಾರ್ ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಗಾಗಿ ದ್ವಿಚಕ್ರವಾಹನ ಮತ್ತು ಸಾರಿಗೇತರ ಮೋಟಾರು ಕಾರ್ ಗಳ ನೋಂದಣಿಯ ವೇಳೆ ಉಪಕರ ವಿಧಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ಎರಡನೇ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಈ ಬಗ್ಗೆ ವಿವರಣೆ ನೀಡಿದ್ದು, ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಚಾಲಕರು ಸೇರಿ ಮತ್ತಿತರ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ನಿಧಿ ಸಂಗ್ರಹಣೆಗೆ ನಿರ್ಧಾರ ಮಾಡಲಾಗಿದೆ. ಅಂತೆಯೇ ದ್ವಿಚಕ್ರ ವಾಹನಗಳ ನೋಂದಣಿ ವೇಳೆ 500 ರೂಪಾಯಿ, ಸಾರಿಗೇತರ ಮೋಟಾರು ಕಾರುಗಳಿಗೆ ಒಂದು ಸಾವಿರ ರೂಪಾಯಿ ಉಪಕರ ವಿಧಿಸಲು ನಿರ್ಧರಿಸಿ ವಿಧೇಯಕಕ್ಕೆ ತಿದ್ದುಪಡಿತರಲಾಗಿದೆ. ಒಂದು ಬಾರಿ ಮಾತ್ರ ಇದನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ.