ಸದ್ಯಕ್ಕೆ ಕೊರೊನಾ ಸಾಂಕ್ರಾಮಿಕದ ಜತೆಗೆ ಇಡೀ ಜಗತ್ತನ್ನು ಬಾಧಿಸುತ್ತಿರುವ ಮತ್ತೊಂದು ಮಹಾಮಾರಿ ಎಂದರೆ ಹವಾಮಾನ ವೈಪರೀತ್ಯ. ಬೇಸಿಗೆ ಕಾಲದಲ್ಲಿ ತಡೆದುಕೊಳ್ಳಲಾಗದಷ್ಟು ಬಿಸಿ, ಮಳೆಗಾಲವು ಮುಗಿಯದೇ ಧಾರಾಕಾರವಾಗಿ ಸುರಿಯುವುದು, ಚಳಿಗಾಲದಲ್ಲಿ ಮೈನಸ್ ಡಿಗ್ರಿಗೆ ತಾಪಮಾನ ಇಳಿಕೆಯಂಥ ಬದಲಾವಣೆಗಳನ್ನು ಅನುಭವಿಸುತ್ತಿದ್ದೇವೆ.
ಹೀಗಾಗಿ ಹವಾಮಾನ ವೈಪರೀತ್ಯಕ್ಕೆ ಅಂಕುಶ ಹಾಕಲು ಹಸಿರುಮನೆ ಅನಿಲಗಳ ನಿಯಂತ್ರಣ, ಆ ಮೂಲಕ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ ಆಗಲೇಬೇಕಿದೆ.
ಇದು ಕೇವಲ ಬಾಯಿ ಮಾತಿನ ವಿಷಯಕ್ಕೆ ಸೀಮಿತವಾಗದೆಯೇ ಫ್ರಾನ್ಸ್‌ನಲ್ಲಿ ಮಾತ್ರವೇ ಹೊಸ ಕಾನೂನು ಆಗಿದೆ.
ಯಾವುದೇ ಕಾರಿನ ಜಾಹೀರಾತಿನಲ್ಲಿ ಜನರನ್ನು ಆಕರ್ಷಿಸುವ ಸಂದೇಶಗಳ ಜತೆಗೆ ನಿಸರ್ಗ ಸ್ನೇಹಿ ಸಂದೇಶಗಳ ಬಳಕೆ ಕಡ್ಡಾಯ. ಅಂದರೆ, ಸಾರ್ವಜನಿಕ ಸಾರಿಗೆ ಬಳಕೆ, ಒಂದೇ ಕಾರಿನಲ್ಲಿ ಹಲವು ಸ್ಥಳಗಳಿಗೆ ತೆರಳುವವರ ಪ್ರಯಾಣ (ಕಾರ್ ಪೂಲಿಂಗ್), ಹತ್ತಿರದ ಸ್ಥಳಗಳಿಗೆ ಕಾಲ್ನಡಿಗೆ ಅಥವಾ ಸೈಕಲ್ ಬಳಸಲು ಉತ್ತೇಜನದಂತಹ ಸಂದೇಶಗಳು ಇರಲೇಬೇಕು. ಸುಖಾಸುಮ್ಮನೆ ಒಬ್ಬರೇ ತಿರುಗಾಡಲು ಐಷಾರಾಮಿ ಕಾರುಗಳನ್ನು ಬಳಸುವವರಿಗೆ ನಿಸರ್ಗದ ಬಗ್ಗೆ ಮನದಟ್ಟು ಮಾಡಿಕೊಡಲು ಸರಕಾರ ಹೀಗೆ ಮಾಡಿದೆ.
ಮುದ್ರಣ ಹಾಗೂ ಸುದ್ದಿವಾಹಿನಿ ಜತೆಗೆ ವೆಬ್‌ಸೈಟ್‌ಗಳಲ್ಲಿ ಪ್ರದರ್ಶಿತಗೊಳ್ಳುವ ಜಾಹೀರಾತುಗಳಿಗೂ ಫ್ರಾನ್ಸ್‌ನಲ್ಲಿ ಹೊಸ ಕಾನೂನು ಅನ್ವಯವಾಗಲಿದೆ. ಆದರೆ, 2022ರ ಮಾರ್ಚ್ 1 ರಿಂದ ಇದು ಜಾರಿಗೆ ಬರಲಿದೆ.
ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯು ವಾಹನಗಳಿಂದ ಕಡಿಮೆ ಆಗಬೇಕು. ಅದಕ್ಕಾಗಿ ಜನರು ಹೆಚ್ಚೆಚ್ಚು ನಿಸರ್ಗ ಸ್ನೇಹಿ ಸಂಚಾರ ವ್ಯವಸ್ಥೆಗಳನ್ನು ಬಳಸಬೇಕು ಎಂಬ ಜಾಗೃತಿಯು ಮುಂದುವರಿದ ದೇಶಗಳ ಮಹಾನಗರ ನಿವಾಸಿಗರಿಗೆ ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯವಾಗಿದೆ ಎನ್ನುತ್ತಾರೆ ಫ್ರಾನ್ಸ್‌ನ ಹಿರಿಯ ಸಚಿವರು.
ಸಿಗರೇಟ್ ಪ್ಯಾಕೆಟ್‌ಗಳ ಮೇಲೆ ಕ್ಯಾನ್ಸರ್‌ಗೆ ತುತ್ತಾಗುವ ಎಚ್ಚರಿಕೆಯಂತೆ ಇನ್ಮುಂದೆ ಕಾರು ಜಾಹೀರಾತುಗಳು ಫ್ರಾನ್ಸ್‌ನಂತಹ ಐರೋಪ್ಯ ರಾಷ್ಟ್ರದಲ್ಲಿ ಕಾಣಲಿವೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಿದ್ದಾರೆ. ಒಂದು ವೇಳೆ ಜಾಹೀರಾತು ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ಪ್ರಕಾರ 42 ಲಕ್ಷ ರೂ.ವರೆಗೆ ಗರಿಷ್ಠ ಮೊತ್ತದ ದಂಡ ವಿಧಿಸಲು ಅವಕಾಶವಿದೆ.
ಪ್ಯಾರಿಸ್‌ನ ಹವಾಮಾನ ನಿಯಂತ್ರಣ ಒಪ್ಪಂದದ ಪ್ರಕಾರ 2040ರ ಗುರಿಯನ್ನು ಹಾಕಿಕೊಂಡಿರುವ ಫ್ರಾನ್ಸ್, ಅಷ್ಟರೊಳಗೆ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಇಂಜಿನ್ ಗಳ ಬಳಕೆಯನ್ನು ಪೂರ್ಣವಾಗಿ ನಿರ್ಬಂಧಿಸುವ ಸಂಕಲ್ಪ ಮಾಡಿದೆ.