ಚಾಮರಾಜನಗರ: ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು, ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಕುಂತೂರಿನಲ್ಲಿ ನಡೆದಿದೆ.
ಶುಭಾ ಹಾಗೂ ಕಾರು ಚಾಲಕ ಊರ್ಜಿತ್ ಮೃತ ದುರ್ದೈವಿಗಳು. ಶುಭಾ ಮೈಸೂರಿನಲ್ಲಿ ಟೆಲಿಕಾಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶುಭಾ ಹಾಗೂ ಮನಿತ್ ಎಂಬುವವರು ಕಾರಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರ ತಪ್ಪಿದ ಕಾರು ಕುಂತೂರು ಕೆರೆ ಬಿದ್ದಿದೆ. ತಡರಾತ್ರಿ ಈ ದುರಂತ ಸಂಭವಿಸಿದೆ. ಮನಿತ್ ಕಾರಿನ ಬಾನೆಟ್ ಮೇಲೆ ನಿಂತು ರಕ್ಷಿಸುವಂತೆ ಕೂಗಿದ್ದಾರೆ. ಯಾರೋ ಕೂಗುವುದನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮನಿತ್ ನನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಅಷ್ಟರಲ್ಲಾಗಲೇ ಚಾಲಕ ಊರ್ಜಿತ್ ಹಾಗೂ ಶುಭಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.