ನಟ ಹೃತಿಕ್ ರೋಷನ್ ಹಾಗೂ ಪ್ರೀತಿ ಜಿಂಟಾ ಮುಖ್ಯ ಭೂಮಿಕೆಯಲ್ಲಿರುವ ‘ಕೋಯಿ ಮಿಲ್ ಗಯಾ’ ಚಿತ್ರದಲ್ಲಿ, ಪ್ರಮುಖ ಪಾತ್ರ ನಿರ್ವಹಿಸಿದ್ದ ನಟ ರಜತ್ ಬೇಡಿ ಚಲಾಯಿಸುತ್ತಿದ್ದ ಕಾರು ಇತ್ತೀಚೆಗೆ ಅಪಘಾತವಾಗಿತ್ತು. ಈ ವೇಳೆ ಪಾದಚಾರಿಯೊಬ್ಬರು ತೀವ್ರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದೀಗ ಪಾದಚಾರಿಯ ಕುಟುಂಬದ ಸಹಾಯಕ್ಕೆ ನಟ ರಜತ್ ಬೇಡಿ ನಿಂತಿದ್ದಾರೆ. ಅಪಘಾತದಲ್ಲಿ ರಜತ್ ಬೇಡಿ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ತಾನು ಹಣಕಾಸಿನ ನೆರವು ಒದಗಿಸುವುದಾಗಿ ಬಹಿರಂಗಪಡಿಸಿದರು.
ಅಪಘಾತದ ಬಗ್ಗೆ ರಜತ್ ಅವರು ಬಹಳ ಚಿಂತೆಗೀಡಾಗಿದ್ದಾರೆ. “ಮೃತರ ಅಂತ್ಯಕ್ರಿಯೆಯ ಎಲ್ಲಾ ಖರ್ಚುಗಳನ್ನು ನಾನು ನೋಡಿಕೊಂಡಿದ್ದೇನೆ. ನಾನು ಅವರಿಗೆ ಆರ್ಥಿಕವಾಗಿ ಬೆಂಬಲ ನೀಡುವುದನ್ನು ಮುಂದುವರಿಸುತ್ತೇನೆ. ಅವರ ಹೆಣ್ಣು ಮಕ್ಕಳನ್ನು ನೋಡಿಕೊಳ್ಳುತ್ತೇನೆ ಮತ್ತು ಅವರಿಗಾಗಿ ಬ್ಯಾಂಕ್ ನಲ್ಲಿ ಎಫ್‌ಡಿಗಳನ್ನು ಮಾಡುತ್ತೇನೆ.” ಜೊತೆಗೆ ಮೃತರ ಪತ್ನಿಗೆ ಸ್ಥಿರ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಸೆಪ್ಟೆಂಬರ್ 6 ರಂದು ಸಂಜೆ 6.30 ರ ಸುಮಾರಿಗೆ ಮುಂಬೈನ ಅಂಧೇರಿ ಪಶ್ಚಿಮದ ಲಿಂಕ್ ರಸ್ತೆಯ ಶಿಟ್ಲಾದೇವಿ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಈ ಸಂಬಂಧ ನಟನ ವಿರುದ್ಧ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.