
ರಾಮನಗರ: ಗೂಡ್ಸ್ ವಾಹನ ಹರಿದು ಇಬ್ಬರು ಮಕ್ಕಳು ಸಾವು ಕಂಡ ಘಟನೆ ರಾಮನಗರ- ಮಾಗಡಿ ರಸ್ತೆಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಟ್ಯೂಷನ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಐವರು ಮಕ್ಕಳ ಮೇಲೆ ಟಾಟಾ ಏಸ್ ಗೂಡ್ಸ್ ವಾಹನ ಹರಿದಿದೆ. ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಕಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಒಂದನೇ ತರಗತಿಯ ರೋಹಿತ್, ಎರಡನೇ ತರಗತಿಯ ಶಾಲಿನಿ ಮೃತಪಟ್ಟ ಮಕ್ಕಳು ಎಂದು ಹೇಳಲಾಗಿದೆ. ಸುಚಿತ್, ಗೌತಮಿ, ಲೇಖನಾ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ಮಕ್ಕಳು ರಸ್ತೆ ದಾಟುವಾಗ ವೇಗವಾಗಿ ಬಂದ ಗೂಡ್ಸ್ ವಾಹನ ಮಕ್ಕಳ ಮೇಲೆ ಹರಿದಿದೆ. ಸ್ಥಳದಲ್ಲೇ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.