ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿವೀರ್’ ಯೋಜನೆ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಈ ಹಿಂದಿನಿಂದಲೂ ಟೀಕೆ ಮಾಡಿಕೊಂಡು ಬಂದಿದ್ದು, ಇದೀಗ ಅಧಿಕೃತವಾಗಿ ಪ್ರತಿಪಕ್ಷ ನಾಯಕನಾಗಿರುವ ರಾಹುಲ್ ಗಾಂಧಿ, ಒಂದೊಮ್ಮೆ ನಾವು ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದರು.
ಈ ಯೋಜನೆ ಅಡಿ 17ವರೆ ವರ್ಷಗಳಿಂದ 21 ವರ್ಷಗಳವರೆಗಿನ ಯುವ ಜನತೆ ಭಾರತೀಯ ಸೇನೆ ಸೇರ್ಪಡೆಯಾಗಬಹುದಾಗಿದ್ದು, ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ. ನಂತರ ಕೇಂದ್ರ ಸರ್ಕಾರ ವಯೋಮಿತಿಯನ್ನು 23 ವರ್ಷಗಳಿಗೆ ಏರಿಕೆ ಮಾಡಿತ್ತು.
ಆದರೆ ನಾಲ್ಕು ವರ್ಷಗಳ ಸೇನಾ ಸೇವೆ ಬಳಿಕ ಈ ಯುವಜನತೆ ಏನು ಮಾಡಬೇಕು ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷ ಮುಂದಿಟ್ಟಿತ್ತಲ್ಲದೆ, ಇದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿತ್ತು. ಇದರ ಮಧ್ಯೆ ಮಂಗಳವಾರದಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ರಾಯ ಬರೇಲಿಗೆ ಭೇಟಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಅವರು, ಕೀರ್ತಿ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮ ಯೋಧ ಕ್ಯಾಪ್ಟನ್ ಅಂಶುಮನ್ ಸಿಂಗ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಅಂಶುಮನ್ ಸಿಂಗ್ ಅವರ ತಾಯಿ, ಮಂಜು ಸಿಂಗ್, ಅಗ್ನಿವೀರ್ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.