ಬೆಂಗಳೂರು: ತಂದೆ ಹಾಗೂ ಮಗ ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಕ್ಯಾಂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಚುಂಚೇಗೌಡನ ಹೊಸಹಳ್ಳಿ ಬಳಿ ನಡೆದಿದೆ.
ಅಂಬಲಗೆರೆ ನಿವಾಸಿ ವರುಣ್ (18) ಮೃತ ವಿದ್ಯಾರ್ಥಿ. ವರುಣ್ ತನ್ನ ತಂದೆಯ ಜತೆಯಲ್ಲಿ ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ. ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್ ಗೆ ಬೈಕ್ ಡಿಕ್ಕಿ ಹೊಡೆದಿದೆ.
ಬಸ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕ್ಯಾಂಟರ್ ಗೆ ಬೈಕ್ ಗುದ್ದಿದ್ದು, ಅಪಘಾತದ ರಭಸಕ್ಕೆ ವಿದ್ಯಾರ್ಥಿ ಹಾರಿ ಕೆಳಗೆ ಬಿದ್ದಿದ್ದಾನೆ. ಆತನ ಮೇಲೆಯೇ ಕ್ಯಾಂಟರ್ ಹರಿದು ಹೋಗಿದೆ ಎಂದು ತಿಳಿದುಬಂದಿದೆ. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.