ಹೈದರಾಬಾದ್: ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಳಗಳನೆ ಅತ್ತಿದ್ದಾರೆ. ಮಾಧ್ಯಮಗಳ ಮುಂದೆ ಟಿಡಿಪಿ ಮುಖ್ಯಸ್ಥರಾದ ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡುವಾಗ ಆಡಿಯೋ ಕಟ್ ಮಾಡಲಾಗಿದೆ. ಕೃಷಿ ಕ್ಷೇತ್ರದ ಬಗ್ಗೆ ಚರ್ಚೆ ವೇಳೆ ಆರೋಪ-ಪ್ರತ್ಯಾರೋಪ ನಡೆದಿದೆ. ನಂತರ ಪಕ್ಷದ ನಾಯಕರೊಂದಿಗೆ ಕಚೇರಿಯಲ್ಲಿ ಚಂದ್ರಬಾಬು ನಾಯ್ಡು ಸಭೆ ನಡೆಸಿದ್ದು ದುಃಖ ತಡೆಯಲಾಗದೆ ಕಣ್ಣೀರು ಹಾಕಿದ್ದಾರೆ.
ಚಂದ್ರಬಾಬು ನಾಯ್ಡು ಅವರನ್ನು ಪಕ್ಷದ ನಾಯಕರು ಸಮಾಧಾನಪಡಿಸಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ನಿರಂತರವಾಗಿ ಅವಮಾನ ಮಾಡಲಾಗುತ್ತಿದೆ. ಆದರೂ ನಾನು ಶಾಂತವಾಗಿದ್ದೆ. ಆದರೆ, ಇಂದು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡಿದ್ದಾರೆ. ನಾನು ಸದಾ ಗೌರವದಿಂದ ಗೌರವಕ್ಕಾಗಿ ಜೀವನ ನಡೆಸಿದ್ದೇನೆ. ಇನ್ನು ಸಹಿಸಲು ಸಾಧ್ಯವಿಲ್ಲ. ಮತ್ತೆ ಅಧಿಕಾರಕ್ಕೆ ಬರುವವರೆಗೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಬೆಳಗ್ಗೆ ರಾಜ್ಯ ವಿಧಾನಸಭೆಯೊಳಗೆ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಸೇರಿದಂತೆ ವಿರೋಧ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ತಾವು ಮತ್ತು ತಮ್ಮ ಪತ್ನಿಯ ಬಗ್ಗೆ ವೈಯಕ್ತಿಕ ಟೀಕೆಗಳ ವಿರುದ್ಧ ಸಮರ್ಥಿಸಿಕೊಳ್ಳಲು ಹೇಳಿಕೆ ನೀಡಲು ನಾಯ್ಡು ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಅವರು ಮಾತನಾಡುವಾಗ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಮೈಕ್ ಕಟ್ ಮಾಡಿದರು. ಆಡಳಿತ ಪಕ್ಷದ ಶಾಸಕರು ನಾಟಕ ಎಂದು ಕೂಗಾಡಿದ್ದಾರೆ. ಮಾತನಾಡಲು ಅವಕಾಶ ನಿರಾಕರಿಸಿದ ನಂತರ, ನಾಯ್ಡು ವಿಧಾನಸಭೆಯಿಂದ ಹೊರನಡೆದರು.