ನವದೆಹಲಿ: ಕೊರೋನಾದಿಂದ ಸಂತ್ರಸ್ತರಾದ ಕುಟುಂಬದವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ.
ವಿಪತ್ತು ಪರಿಹಾರ ನಿಧಿಯಡಿ ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಶನಿವಾರ ರಾತ್ರಿ 183 ಪುಟಗಳ ಅಫಿಡವಿಟ್ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ.
ಸಂತ್ರಸ್ತ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಕನಿಷ್ಠ ಪರಿಹಾರ ನೀಡಬೇಕೆಂದು ಸಲ್ಲಿಕೆಯಾದ ಪಿಐಎಲ್ ಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಈ ಅಫಿಡವಿಟ್ ಸಲ್ಲಿಸಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಭಾನುವಾರದವರೆಗೆ ದೇಶದಲ್ಲಿ 3,86,713 ಜನರು ಮೃತಪಟ್ಟಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ತೀವ್ರ ಆರ್ಥಿಕ ಒತ್ತಡದಲ್ಲಿ ಸಿಲುಕಿರುವ ರಾಜ್ಯಗಳು ಕೋವಿಡ್ ಕಾರಣದಿಂದ ಮರಣ ಹೊಂದಿದ ಪ್ರತಿಯೊಬ್ಬರಿಗೂ ಪರಿಹಾರ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಲ್ಲದೆ, ಆರೋಗ್ಯ ಸೇವೆ ಮತ್ತು ಕಡಿಮೆ ತೆರಿಗೆ ಆದಾಯ ಕಾರಣದಿಂದಾಗಿ ಲಕ್ಷಾಂತರ ಸಂತ್ರಸ್ತರಿಗೆ ಪರಿಹಾರವನ್ನು ಭರಿಸಲು ಆಗುವುದಿಲ್ಲವೆಂದು ತಿಳಿಸಲಾಗಿದೆ.
ಭೂಕಂಪ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಗೆ ಮಾತ್ರ ಪರಿಹಾರ ಅನ್ವಯಿಸುತ್ತದೆ ಎಂದು ವಿಪತ್ತು ನಿರ್ವಹಣಾ ಕಾನೂನು ಹೇಳುತ್ತದೆ ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ವಿವರಿಸಿದೆ. ಸಾಂಕ್ರಾಮಿಕ ರೋಗ COVID-19 ಗೆ ಅನ್ವಯಿಸುವುದು ಸೂಕ್ತವಲ್ಲ ಎಂದು ಹೇಳಿದೆ.