ಭಾರತೀಯ ದಂಡ ಸಂಹಿತೆಯಲ್ಲಿರುವ ಸೂಕ್ತ ವಿಧಿಗಳನ್ನು ಬಳಸಿ ಸಿದ್ಧಪಡಿಸಿಲ್ಲ ಎಂಬ ಕಾರಣಕ್ಕೆ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್) ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ.
ತನ್ನ ವಿರುದ್ಧ ಸಲ್ಲಿಸಲಾಗಿದ್ದ ಸುಲಿಗೆ ಪ್ರಕರಣವನ್ನು ವಜಾಗೊಳಿಸಲು ಕೋರಿ ಅರ್ಜಿ ಸಲ್ಲಿಸಿದ್ದ ಮುಂಬಯಿ ನಿವಾಸಿಯೊಬ್ಬರ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ.
ಉದ್ಯಮಿ ರೂಪಿನ್ ಬ್ಯಾಂಕರ್ ತಂದೆ ಹೇಮಂತ್ ಬ್ಯಾಂಕರ್ ಸಲ್ಲಿಸಿದ್ದ ಈ ಅರ್ಜಿಯಲ್ಲಿ, ಆಗಸ್ಟ್ 2020ರಂದು ಬಿಲ್ಡರ್ ಕೈಲಾಶ್ ಅಗರ್ವಾಲ್ ನೀಡಿದ ದೂರಿನ ಅನ್ವಯ ವರ್ಲಿ ಪೊಲೀಸರು ಸುಲಿಗೆ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಲು ಸೂಕ್ತವಾಗಿದ್ದು, ಆಸ್ತಿ, ಮೌಲ್ಯಯುತ ವಸ್ತುವಿನ ಡೆಲಿವರಿಯ ಆಪಾದನೆ ಮಾಡದೇ ಇರುವ ಕಾರಣ, ಭಾರತೀಯ ದಂಡ ಸಂಹಿತೆಯ 387ನೇ ಸೆಕ್ಷನ್ (ಸುಲಿಗೆ) ತಮ್ಮ ವಿರುದ್ಧ ವಿಧಿಸಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್
“ನಿರ್ದಿಷ್ಟ ವಿಧಿಯೊಂದರ ತಪ್ಪಾದ ಬಳಕೆಯನ್ನೇ ಆಧಾರವಾಗಿಟ್ಟುಕೊಂಡು ಎಫ್‌ಐಆರ್ ವಜಾಗೊಳಿಸಲು ಬರುವುದಿಲ್ಲ. ಎಫ್‌ಐಆರ್‌ನಲ್ಲಿ ಹೇಳಿರುವ ಅಪರಾಧವನ್ನು ಮಾಡಿಯೇ ಇಲ್ಲವೆಂದು ಸಾಬೀತಾದಲ್ಲಿ ಮಾತ್ರವೇ ಹಾಗೆ ಮಾಡಲು ಸಾಧ್ಯ,” ಎಂದು ನ್ಯಾಯಾಧೀಶರಾದ ನಿತಿನ್ ಜಮ್ದಾರ್ ಮತ್ತು ಸಾರಂಗ್ ಕೋತ್ವಾಲ್ ಇದ್ದ ವಿಭಾಗೀಯ ಪೀಠ ತಿಳಿಸಿದೆ.
ವಿಜಯ್ ಶೆಟ್ಟಿ ಎಂಬ ವ್ಯಕ್ತಿಯೊಬ್ಬರು ಬಿಲ್ಡರ್‌ನನ್ನು ಬೆದರಿಸಿದ ಕಾರಣ ಈ ಪ್ರಕರಣದಲ್ಲಿ ಹೇಮಂತ್ ಬ್ಯಾಂಕರ್ ವಿರುದ್ಧದ ಆಪಾದನೆಯು ಕ್ರಿಮಿನಲ್ ನಡೆಯೊಂದನ್ನು ತೋರುತ್ತಿದೆ ಎಂದ ಕೋರ್ಟ್, “ಹೀಗಾಗಿ ಅರಿಯಬಲ್ಲಂಥ ಅಪರಾಧ ಮಾಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಎಫ್‌ಐಆರ್ ವಜಾಗೊಳಿಸಲು ಬರುವುದಿಲ್ಲ,” ಎಂದಿದೆ.
ತನ್ನೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ರೂಪಿನ್ ಬ್ಯಾಂಕರ್, ಬಳಿಕ ಹುಸಿ ಸಹಿಗಳನ್ನು ಬಳಸಿಕೊಂಡು ಬ್ಯಾಂಕ್ ಆಫ್ ಬರೋಡಾದ ದುಬಾಯ್ ಶಾಖೆಯಲ್ಲಿ 35 ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದಾಗಿ ಬಿಲ್ಡರ್ ಅಗರ್ವಾಲ್ ಆರೋಪಿಸಿದ್ದಾರೆ. ಪೊಲೀಸ್ ದೂರು ನೀಡದಂತೆ ತಮಗೆ ಬೆದರಿಕೆ ಕರೆಗಳೂ ಬಂದಿದ್ದವು ಎಂದು ಬಿಲ್ಡರ್ ದೂರಿನಲ್ಲಿ ತಿಳಿಸಿದ್ದಾರೆ.