ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಸಂತ್ರಸ್ತೆಯು ಲೈಂಗಿಕವಾಗಿ ಸಕ್ರಿಯರಾಗಿದ್ದರೂ ಸಹ ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಆರ್. ನಾರಾಯಣ ಪಿಷರ್ದಿ, 16 ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ. ಆಕೆ ತನಗೆ ಬೇರೆಯವರ ಜೊತೆಯೂ ಲೈಂಗಿಕ ಸಂಬಂಧವಿದೆ ಎಂದು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದರೂ ಸಹ ಅದು ಈ ಪ್ರಕರಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಸಂತ್ರಸ್ತ ಬಾಲಕಿಯು ಬೇರೆಯವರೊಂದಿಗೂ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ಕೋರ್ಟ್ ಮುಂದೆ ಆರೋಪ ಕೇಳಿ ಬಂದ ಬಳಿಕ ನ್ಯಾಯಮೂರ್ತಿ ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಂತ್ರಸ್ತೆಯ ಚಾರಿತ್ರ್ಯವನ್ನು ಕೋರ್ಟ್ ಮುಂದೆ ಪ್ರಶ್ನಿಸಿದ್ದ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದ ಕೇರಳ ಹೈಕೋರ್ಟ್, ಇಲ್ಲಿ ಆರೋಪಿಯ ಚಾರಿತ್ರ್ಯವನ್ನು ಮಾತ್ರ ಪರಿಗಣಿಸಲಾಗುತ್ತದೆ. ಸಂತ್ರಸ್ತೆಯ ಲೈಂಗಿಕ ಸಂಬಂಧಗಳ ಬಗ್ಗೆ ಇಲ್ಲಿ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಸಂತ್ರಸ್ತೆಯು ಲೈಂಗಿಕ ಸಂಬಂಧಗಳ ಅನುಭವ ಉಳ್ಳವಳೇ ಆಗಿದ್ದರೂ ಸಹ ಆಕೆಯ ಮೇಲೆ ನಡೆದ ಅತ್ಯಾಚಾರವನ್ನೂ ಒಮ್ಮತದ ಲೈಂಗಿಕ ಕ್ರಿಯೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗುವುದು ಕಾಡನ್ನು ರಕ್ಷಿಸಬೇಕಾದವನೇ ಬೇಟೆಗಾರನಾಗಿದ್ದಕ್ಕಿಂತಲೂ ಕಡೆಯಾಗಿದೆ ಎಂದು ಕೋರ್ಟ್ ಆರೋಪಿಗೆ ಛೀಮಾರಿ ಹಾಕಿದೆ.
ತಂದೆಯು ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದು ಇದರಿಂದ ನಾನು ಗರ್ಭ ಧರಿಸಿದ್ದೇನೆ ಅಲ್ಲದೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಅಪ್ರಾಪ್ತೆ ದೂರಿದ್ದಳು. ಗರ್ಭ ಧರಿಸಿದ ಬಳಿಕವೇ ನಾನು ತಾಯಿ ಹಾಗೂ ಸಂಬಂಧಿಯ ಜೊತೆ ಬಂದು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅಪ್ರಾಪ್ತೆ ಹೇಳಿದ್ದಾಳೆ.