ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಕ್ಯಾನ್ಸರ್ ಹೆಸರು ಕೇಳಿದ್ರೆ ಸಾಕು, ಸಾವು ನಮ್ಮೆದುರು ಬಂದು ನಿಂತಂತೆ ಭಾಸವಾಗುತ್ತದೆ. ಜಗತ್ತಿನಾದ್ಯಂತ ಅತಿ ಹೆಚ್ಚು ಸಾವುಗಳಿಗೆ ಕ್ಯಾನ್ಸರ್ ಎರಡನೇ ಅತಿದೊಡ್ಡ ಕಾರಣವಾಗಿದೆ. ರೋಗಲಕ್ಷಣಗಳ ಹೆಚ್ಚುತ್ತಿರುವ ತೀವ್ರತೆಯ ಆಧಾರದ ಮೇಲೆ ಕ್ಯಾನ್ಸರ್ ಅನ್ನು ಹಲವಾರು ಹಂತಗಳಾಗಿ ವಿಂಗಡಿಸಲಾಗಿದೆ.
ಕ್ಯಾನ್ಸರ್ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಅದನ್ನು ತೊಡೆದು ಹಾಕಲು, ಕೀಮೋಥೆರಪಿ ಮತ್ತು ರೇಡಿಯೊಥೆರಪಿಯಂತಹ ಚಿಕಿತ್ಸಾ ಆಯ್ಕೆಗಳು ಸಹ ಲಭ್ಯವಿದೆ. ಇದೀಗ ಕ್ಯಾನ್ಸರ್ ಚಿಕಿತ್ಸೆಯಲ್ಲೊಂದಾದ ಇಮ್ಯುನೊಥೆರಪಿ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ.
ಇಮ್ಯುನೊಥೆರಪಿ ಎಂದರೇನು ?
ಇಮ್ಯುನೊಥೆರಪಿ ಒಂದು ರೀತಿಯ ಕ್ಯಾನ್ಸರ್ ಚಿಕಿತ್ಸೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಪ್ರಯೋಗಾಲಯದಲ್ಲಿ ರಚಿಸಲಾದ ವಸ್ತುಗಳನ್ನು ಬಳಸಿ ದೇಹವು ಕ್ಯಾನ್ಸರ್ ಕೋಶಗಳನ್ನು ಹುಡುಕಲು ಮತ್ತು ನಾಶಮಾಡಲು ಸಹಾಯ ಮಾಡುತ್ತದೆ. ಹಲವಾರು ರೀತಿಯ ಇಮ್ಯುನೊಥೆರಪಿಗಳಿವೆ. ಕೆಲವು ಇಮ್ಯುನೊಥೆರಪಿ ಚಿಕಿತ್ಸೆಗಳು ಪ್ರತಿರಕ್ಷಣಾ ವ್ಯವಸ್ಥೆಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸಲು ಅಥವಾ ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಏಕಾಂಗಿಯಾಗಿ ಬಳಸಬಹುದು ಅಥವಾ ಕೀಮೋಥೆರಪಿ ಸೇರಿದಂತೆ ಇನ್ನಿತರ ಕ್ಯಾನ್ಸರ್ ಚಿಕಿತ್ಸೆಗಳ ಸಂಯೋಜನೆಯಲ್ಲಿ ಬಳಸಬಹುದು.
ಕ್ಯಾನ್ಸರ್‌ನ ಹಲವು ಹಂತಗಳಲ್ಲಿ ಇಮ್ಯುನೊಥೆರಪಿ ಉಪಯುಕ್ತವಾಗಿದೆ. ಆದರೆ ಇದು ಮೂತ್ರಪಿಂಡ, ಹೊಟ್ಟೆ, ಶ್ವಾಸಕೋಶ ಮತ್ತು ಕ್ಯಾನ್ಸರ್‌ನ 4 ಹಂತಗಳಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಪ್ರಯೋಜನಕಾರಿ. ಕ್ಯಾನ್ಸರ್ ರೋಗಿಗಳಲ್ಲಿ ಇಮ್ಯುನೊಥೆರಪಿ ಹೊಸ ಭರವಸೆ ಮೂಡಿಸಿದೆ.
ಆದರೆ ಈ ಚಿಕಿತ್ಸೆ ಎಲ್ಲಾ ರೋಗಿಗಳಿಗೂ ಪರಿಣಾಮಕಾರಿಯಾಗುವುದಿಲ್ಲ. ಚಿಕಿತ್ಸೆ ಪಡೆದವರ ಪೈಕಿ 25-30 ಪ್ರತಿಶತ ರೋಗಿಗಳಿಗೆ ಗರಿಷ್ಠ ಪ್ರಯೋಜನವನ್ನು ದೊರಕುತ್ತದೆ. ಈ ಚಿಕಿತ್ಸೆಯನ್ನು ಶಿಫಾರಸು ಮಾಡುವ ಮೊದಲು ವೈದ್ಯರು ಕೆಲವು ಅಂಶಗಳನ್ನು ಪರಿಗಣಿಸುತ್ತಾರೆ.
ಇಮ್ಯುನೊಥೆರಪಿ ವೆಚ್ಚ
ಇಮ್ಯುನೊಥೆರಪಿ ಕೊಂಚ ದುಬಾರಿ. ಬಡ ಮತ್ತು ಮಧ್ಯಮವರ್ಗದವರಿಗೆ ಈ ಚಿಕಿತ್ಸೆ ಪಡೆಯುವುದು ಸುಲಭವಿಲ್ಲ. ದೇಶದಲ್ಲಿ ಇಮ್ಯುನೊಥೆರಪಿಯ ವೆಚ್ಚವು ಪ್ರತಿ ಸೆಷನ್‌ಗೆ ಸುಮಾರು 1,50,000-4,50,000 ರೂಪಾಯಿವರೆಗಿದೆ. ಈ ವೆಚ್ಚ ರೋಗಿಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.