ಪ್ರಪಂಚದ ಭಯಂಕರ ಕಾಯಿಲೆಯಲ್ಲಿ ಕ್ಯಾನ್ಸರ್‌ಗೆ ಅಗ್ರಸ್ಥಾನ. ಕ್ಯಾನ್ಸರ್ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಈ ರೋಗ ಗುಣಪಡಿಸಲು ಬಗೆಬಗೆಯಲ್ಲಿ ಸಂಶೋಧನೆಗಳು ನಡೆದಿವೆ. ಔಷಧಿಗಳು, ಚಿಕಿತ್ಸೆಗಳು ಮಾರುಕಟ್ಟೆಯಲ್ಲಿವೆ. ಆದರೂ ಪೂರ್ಣ ಭರವಸೆ ಇಡುವ ಬೆಳವಣಿಗೆ ನಡೆದಿಲ್ಲ.
ಈ ನಡುವೆ ಯುಎಸ್ ನಲ್ಲಿ ನಡೆದಿರುವ ಒಂದು ಪ್ರಯೋಗ ಅಚ್ಚರಿ ಫಲಿತಾಂಶ ನೀಡಿದೆ. ಯುಎಸ್ ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿ ರೋಗಿಗಳ ಮೇಲೆ ನಡೆದ ಪ್ರಯೋಗದಲ್ಲಿ ಶೇ.100 ಕ್ಯಾನ್ಸರ್ ನಿರ್ಮೂಲನೆಯನ್ನು ಔಷಧ ಪ್ರಯೋಗವು ತೋರಿಸಿದೆ.
ಪ್ರಯೋಗವು ಚಿಕ್ಕದಾಗಿದ್ದರೂ, ದೀರ್ಘ ಮತ್ತು ಕಿಮೊಥೆರಪಿ, ಶಸ್ತ್ರಚಿಕಿತ್ಸೆಗಳ ಬದಲು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಎಂಬ ಭರವಸೆಯನ್ನು ತಂದಿದೆ.
18 ಗುದನಾಳದ ಕ್ಯಾನ್ಸರ್ ರೋಗಿಗಳಿಗೆ ಡೋಸ್ಟಾರ್ಲಿಮಾಬ್ ಔಷಧವನ್ನು ನೀಡಲಾಯಿತು, ಬಳಿಕ ದೈಹಿಕ ಪರೀಕ್ಷೆ, ಎಂಡೋಸ್ಕೋಪಿ, ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (ಪಿಇಟಿ) ಅಥವಾ ಎಂಆರ್ಐ ಮೂಲಕ ರೋಗ ಪತ್ತೆಹಚ್ಚಲು ಸಾಧ್ಯವಾಗದ ಕಾರಣ ಅವರೆಲ್ಲ ಸಂಪೂರ್ಣವಾಗಿ ಚೇತರಿಸಿಕೊಂಡಂತೆ ಕಾಣಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2020 ರಲ್ಲಿ ಸುಮಾರು 10 ಮಿಲಿಯನ್ ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಸ್ತನ ಕ್ಯಾನ್ಸರ್ ಹೆಚ್ಚಿನ ಹೊಸ ಪ್ರಕರಣಗಳಿಗೆ (2.26 ಮಿಲಿಯನ್) ಕಾರಣವಾದರೆ ಶ್ವಾಸಕೋಶದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ (2.21 ಮಿಲಿಯನ್), ನಂತರ ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ ರೋಗಿಗಳು (1.93 ಮಿಲಿಯನ್) ಇದ್ದಾರೆ.
ಈ ಹೊಸ ಔಷಧವು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆಯೂ ಸಣ್ಣ ವಿವರಣೆ ಸಿಕ್ಕಿದೆ. ರೋಗಿಗಳಿಗೆ ಆರು ತಿಂಗಳವರೆಗೆ ಪ್ರತಿ ಮೂರು ವಾರಗಳಿಗೊಮ್ಮೆ ಡೋಸ್ಟಾರ್ಲಿಮಾಬ್ ಅನ್ನು ನೀಡಲಾಯಿತು.
ಔಷಧಿಯು ಕ್ಯಾನ್ಸರ್ ಕೋಶಗಳನ್ನು ಮಸುಕು ಮಾಡುವ ಗುರಿಯನ್ನು ಹೊಂದಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಅವುಗಳನ್ನು ಸ್ವಾಭಾವಿಕವಾಗಿ ಗುರುತಿಸಲು ಮತ್ತು ನಾಶಮಾಡಲು ಅನುವು ಮಾಡಿಕೊಡುತ್ತದೆ.