ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ಔಷಧಿಯ ವೆಚ್ಛ ಭರಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕನಿಷ್ಠ ದರದಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಕಲ್ಪಿಸಲು ಸೊಸೈಟಿಯನ್ನು ಸ್ಥಾಪನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಕ್ಯಾನ್ಸರ್ ಸಮಶೊಧನಾ ಮತ್ತು ತರಬೇತಿ ಕೇಂದ್ರದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿರುವ ಒ.ಪಿ.ಡಿ ಬ್ಲಾಕ್ ಹಾಗೂ ಇತರೆ ಸೌಲಭ್ಯಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಿ.ಎಸ್.ಆರ್ ಹಾಗೂ ಸರ್ಕಾರದ ನಿಧಿಯನ್ನು ಬಳಸಿ ಸೊಸೈಟಿಯ ಮೂಲಕ ರೋಗಿಗಳ ಆರೈಕೆಯಲ್ಲಿರುವ ಅವರ ಕುಟುಂಬದವರಿಗೆ ಅಗತ್ಯವಿರುವ ಅನುಕೂಲವನ್ನು ಸಹ ಕಲ್ಪಿಸಲು ಕ್ರಮ ವಹಿಸಲಾಗುವುದು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರಗಳ ಬಳಕೆಗೆ ಒತ್ತು ನೀಡಲಾಗುವುದು. ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕಿದ್ವಾಯಿ ಸಂಸ್ಥೆ, ಜಗತ್ತಿನ ಎಲ್ಲ ಉತ್ತಮ ವೈದ್ಯಕೀಯ ಸಂಸ್ಥೆಗಳೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಇನ್ಫೋಸಿಸ್ ಪ್ರತಿಷ್ಠಾನ ರಾಜ್ಯದ ಅನೇಕ ಆಸ್ಪತ್ರೆಗಳಿಗೆ ಹಾಗೂ ಶಾಲಾ, ಕಾಲೇಜುಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ಮಾತನ್ನು ಪ್ರತಿಷ್ಠಾನದ ವತಿಯಿಂದ ಅಕ್ಷರಶ: ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರು ಪಾಲಿಸಿಕೊಂಡು ಬಂದಿದ್ದಾರೆ ಎಂದರು.
ಕ್ಯಾನ್ಸರ್ ಜೊತೆ ಹೋರಾಟ ಮಾಡುವಾಗ ಮಾನವೀಯತೆಯನ್ನು ಉಳಿಸಿಕೊಳ್ಳಬೇಕು. ಬಡ ರೋಗಿಗಳಿಗೆ ಸಹಾಯಕ್ಕೆ ಇನ್ನಷ್ಟು ದಾನಿಗಳು ಮುಂದೆ ಬರಬೇಕು. ನಾಡಿಗೆ ಹೃದಯವಿರುವ ಶ್ರೀಮಂತರ ಅಗತ್ಯವಿದೆ. ಒಬ್ಬರಿಗೊಬ್ಬರ ಪ್ರೇರಣೆಯಿಂದ ಜಗತ್ತು ನಡೆಯುತ್ತಿದೆ. ಒಳ್ಳೆಯ ಕೆಲಸ ಮಾಡಿದಾಗ ಮರೆಯದೆ ಮೆಲಕು ಹಾಕಬೇಕು. ಈ ಬಗ್ಗೆ ಚಿಂತನೆ ಮಾಡಿದಾಗ ಶಕ್ತಿ ತುಂಬಿ ಇನ್ನಷ್ಟು ದೊಡ್ಡ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ ಎಂದರು.
ತಮ್ಮ ತಾಯಿಗೆ ಕ್ಯಾನ್ಸರ್ ಪೀಡಿತರಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಮುಖ್ಯಮಂತ್ರಿಗಳು, ಕ್ಯಾನ್ಸರ್ ಚಿಕಿತ್ಸೆಯೇ ಸಮಸ್ಯೆ ಎನ್ನುವಂಥ ಕಾಲವಿತ್ತು. ಸಂಶೋಧನೆಯ ಫಲವಾಗಿ ಚಿಕಿತ್ಸೆಯಲ್ಲಿ ಈಗ ಸಾಕಷ್ಟು ಸುಧಾರಣೆಯಾಗಿದೆ. ಕಾಯಿಲೆಗೆ ಒಳಗಾದವರು ಮಾನಸಿಕ ಒತ್ತಡ ಬಹಳವಿರುತ್ತದೆ. ಕಿದ್ವಾಯಿ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಅಸ್ತಿತ್ವದಲ್ಲಿದ್ದು, ಇಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಕೆಲಸ ಮಾಡಿದ್ದು, ಅವರೆಲ್ಲರ ಸೇವೆ ಅಮೋಘವಾಗಿದೆ ಎಂದು ಶ್ಲಾಘಿಸಿ, ಇಂಥ ಸೇವೆ ಮಾಡುವ ಸಂಸ್ಥೆಗೆ ನಮ್ಮ ಸರ್ಕಾರದ ಬೆಂಬಲ ಸದಾ ಇರುತ್ತದೆ ಎಂದರು.
ಕಲಬುರಗಿ, ಶಿವಮೊಗ್ಗ, ಮೈಸೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಿದ್ದು, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ಹಾಗೂ ಪ್ರಾದೇಶಿಕವಾರು ಕ್ಯಾನ್ಸರ್ ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯ ಸಚಿವ ದಾ: ಕೆ.ಸಧಾಕರ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ: ಸಿ.ರಾಮಚಂದ್ರ ಹಾಗೂ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.