ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ದಿನವಾದ ಸೆಪ್ಟೆಂಬರ್ 5 ನ್ನು ’ಗೌರಿ ಲಂಕೇಶ್ ದಿನ’ ಎಂದು ಕೆನಡಾದ ಬರ್ನಬಿ ನಗರಾಡಳಿತ ಘೋಷಣೆ ಮಾಡಿದೆ. ಗೌರಿ ಹತ್ಯೆಯ ನಾಲ್ಕನೇ ವರ್ಷದ ದಿನದಂದು ಈ ನಗರದಲ್ಲಿ ಶೋಕ ಸೂಚಿಸಲಾಗುವುದು.
ಸೆಪ್ಟೆಂಬರ್ 5, 2017ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು.
ಗೌರಿ ಲಂಕೇಶ್ ದಿನ ಆಚರಿಸುವ ನಿರ್ಧಾರವನ್ನು ಬರ್ನಬೀ ನಗರ ಪಾಲಿಕೆಯು ಆಗಸ್ಟ್ 30ರಂದು ನಡೆದ ಸಭೆಯಲ್ಲಿ ತೆಗೆದುಕೊಂಡಿದೆ. ಈ ಸಂಬಂಧ ನಗರದ ಮೇಯರ್ ಮೈಕ್ ಹರ್ಲೆ ಘೋಷಣೆ ಮಾಡಿದ್ದು, ನಗರಾಡಳಿತದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಬಹಿರಂಗವಾಯ್ತು ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಸ್ಪೋಟಕ ಮಾಹಿತಿ
“ತಮ್ಮ ಕೆಲಸದ ಮೂಲಕ ಗೌರಿ ಲಂಕೇಶರು ಸತ್ಯ ಹಾಗೂ ನ್ಯಾಯಕ್ಕಾಗಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು, ತೀವ್ರವಾದ ತೊರೆದು, ಜಾತಿ ಆಧರಿತ ಬೇಧಭಾವಗಳ ವಿರುದ್ಧ ಹೋರಾಡಲು ತಮ್ಮ ಓದುಗರಿಗೆ ಪ್ರೇರಣೆ ನೀಡಿದ್ದರು” ಎಂದು ನಗರಾಡಳಿತದ ಪೋರ್ಟಲ್‌ನಲ್ಲಿ ಗೌರಿಯವರನ್ನು ಪ್ರಶಂಶಿಸಲಾಗಿದೆ.