ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸ್ವದೇಶದಲ್ಲೇ ಮುಖಭಂಗವಾಗಿದೆ.
ಸ್ವದೇಶಿ ಮಾಧ್ಯಮಗಳಿಂದಲೇ ಜಸ್ಟಿನ್ ಟ್ರುಡೊ ನಡೆಗೆ ಟೀಕೆ ವ್ಯಕ್ತವಾಗಿದ್ದು, ಅವರ ಜನಪ್ರಿಯತೆ ತೀವ್ರ ಕುಸಿತ ಕಂಡಿರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಕೆನಡಾದ 50 ವರ್ಷದ ರಾಜಕೀಯ ಇತಿಹಾಸದಲ್ಲೇ ಜಸ್ಟಿನ್ ಟ್ರುಡೊ ಅತ್ಯಂತ ಕಳಪೆ ಪ್ರಧಾನಿ ಎಂದು ಸಮೀಕ್ಷೆಯಲ್ಲಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆನಡಾದ ಉತ್ತಮ ನಾಯಕರು ಯಾರು? ಮುಂದಿನ ಪ್ರಧಾನಿ ಯಾರಾಗಬೇಕು ಎಂದು ನಡೆಸಲಾದ ಸಮೀಕ್ಷೆಯಲ್ಲಿ ಜಸ್ಟಿನ್ ಟ್ರುಡೊ ಅವರಿಗಿಂತ ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕರಾದ ಪಿಯರೆ ಪೊಯಿಲಿವ್ರೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಪಿಯರೆ ಜನಮತ ಅಭಿಪ್ರಾಯ ಸಂಗ್ರಹದಲ್ಲಿ ಶೇ. 39 ರಷ್ಟು, ಪ್ರಧಾನಿ ಟ್ರುಡೊ ಶೇ. 30ರಷ್ಟು ಮತ ಪಡೆದುಕೊಂಡಿದ್ದಾರೆ ಎಂದು ಕೆನಡಾ ಗ್ಲೋಬಲ್ ನ್ಯೂಸ್ ಹೇಳಿದೆ.
ತನಿಖೆ ಪೂರ್ಣಗೊಳ್ಳುವ ಮೊದಲೇ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಮೈಲೇಜ್ ಪಡೆಯಲು ಮುಂದಾಗಿದ್ದ ಕೆನಡಾ ಪ್ರಧಾನಿ ಟ್ರುಡೊ ಮುಖಭಂಗಕ್ಕೆ ಒಳಗಾಗಿದ್ದಾರೆ. ವಿಪಕ್ಷಗಳು, ಮಾಧ್ಯಮಗಳು ಟ್ರುಡೊ ಅವರ ನಡೆಯನ್ನು ಟೀಕಿಸಿದ್ದು, ಭಾರತದ ವಿರುದ್ಧ ತಾವು ಮಾಡಿದ ಆರೋಪಕ್ಕೆ ಸಾಕ್ಷ್ಯ ನೀಡುವಲ್ಲಿ ಟ್ರುಡೊ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.