ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಸಂಭವಿಸಿದ ಅನುಮಾನಾಸ್ಪದ ಬೆಂಕಿ ಅವಘಡದಲ್ಲಿ ಭಾರತೀಯ ಮೂಲದ ದಂಪತಿಗಳು ಮತ್ತು ಅವರ ಹದಿಹರೆಯದ ಪುತ್ರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ(ಮಾರ್ಚ್ 15) ತಿಳಿಸಿದ್ದಾರೆ.
ಕಳೆದ ಗುರುವಾರ (ಮಾರ್ಚ್ 7) ಬ್ರಾಂಪ್ಟನ್‌ನ ಬಿಗ್ ಸ್ಕೈ ವೇ ಮತ್ತು ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿನ ಮನೆಗೆ ಬೆಂಕಿ ಆವರಿಸಿದೆ ಎಂದು ಪೀಲ್ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಕಿಯನ್ನು ನಂದಿಸಿದ ನಂತರ, ತನಿಖಾಧಿಕಾರಿಗಳು ಮಾನವರ ಅವಶೇಷಗಳನ್ನು ಸುಟ್ಟ ಮನೆಯೊಳಗೆ ಪತ್ತೆ ಮಾಡಿದರು, ಆದರೆ ಕೊಲ್ಲಲ್ಪಟ್ಟ ಜನರ ಸಂಖ್ಯೆಯನ್ನು ಆ ಸಮಯದಲ್ಲಿ ಕಂಡುಹಿಡಿಯಲಾಗಲಿಲ್ಲ. ಸುಟ್ಟು ಕರಕಲಾದ ಅವಶೇಷಗಳನ್ನು ಶುಕ್ರವಾರ ಮೂರು ಕುಟುಂಬ ಸದಸ್ಯರದ್ದು ಎಂದು ಗುರುತಿಸಲಾಗಿದೆ: 51 ವರ್ಷ ವಯಸ್ಸಿನ ರಾಜೀವ್ ವಾರಿಕೂ; ಅವರ ಪತ್ನಿ 47 ವರ್ಷದ ಶಿಲ್ಪಾ ಕೋಥಾ; ಮತ್ತು ಅವರ 16 ವರ್ಷದ ಮಗಳು ಮಾಹೆಕ್ ವಾರಿಕೂ ಮೃತಪಟ್ಟವರು.
ಅವರು ವಾಸವಾಗಿದ್ದ ಮನೆಯಲ್ಲಿ ತಗುಲಿದ ಬೆಂಕಿ ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ ಎಂದು ಪೀಲ್ ಪೊಲೀಸ್ ಕಾನ್ಸ್‌ಟೇಬಲ್ ಟಾರಿನ್ ಯಂಗ್ ಶುಕ್ರವಾರ ಹೇಳಿದ್ದಾರೆ.
ಈ ಸಮಯದಲ್ಲಿ, ನಾವು ನಮ್ಮ ನರಹತ್ಯೆ ಬ್ಯೂರೋದೊಂದಿಗೆ ಇದನ್ನು ತನಿಖೆ ಮಾಡುತ್ತಿದ್ದೇವೆ. ಒಂಟಾರಿಯೊ ಫೈರ್ ಮಾರ್ಷಲ್ ಈ ಬೆಂಕಿ ಆಕಸ್ಮಿಕವಲ್ಲ ಎಂದು ಪರಿಗಣಿಸಿದಂತೆ ನಾವು ಇದನ್ನು ಅನುಮಾನಾಸ್ಪದವೆಂದು ಪರಿಗಣಿಸುತ್ತಿದ್ದೇವೆ ಎಂದು ಯಂಗ್ ಹೇಳಿದ್ದಾರೆ.