ಪೊದೆಯೊಂದರಲ್ಲಿ ಅಡಗಿ ಬೇಟೆಗೆ ಹೊಂಚುಹಾಕುತ್ತಿದ್ದ ದೈತ್ಯ ಮೊಸಳೆಯ ವಿಡಿಯೋವೊಂದು ನೆಟ್ಟಿಗರನ್ನ ಬೆಚ್ಚಿಬೀಳಿಸಿದೆ. ಬರೋಬ್ಬರಿ 4 ಮೀಟರ್ ಉದ್ದದ ಮೊಸಳೆಯ ವಿಡಿಯೋವನ್ನ ಸ್ಕಾಟ್ ಗೋರ್ಮನ್ ಎಂಬವರು ಚಿತ್ರೀಕರಿಸಿದ್ದಾರೆ.
ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ಈ ದೃಶ್ಯವನ್ನ ಸೆರೆಹಿಡಿಯಲಾಗಿದೆ.
ಈ ಮೊಸಳೆಯು ದೂರದಲ್ಲಿ ನಿಂತು ನೋಡದೇ ಇರುವವರಿಗೆ ಲಕ್ಷ್ಯಕ್ಕೆ ಬಾರದಷ್ಟರ ಮಟ್ಟಿಗೆ ತಟಸ್ಥವಾಗಿತ್ತು. ಸಮೀಪ ಬಂದು ನೋಡಿದಾಗ ಮಾತ್ರ ಇಲ್ಲಿ ಮೊಸಳೆ ಇರೋದು ಗಮನಕ್ಕೆ ಬಂದಿದೆ. ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ.
ಗೋರ್ಮನ್ ಕ್ಯಾಮರಾವನ್ನ ಜೂಮ್ ಮಾಡಿ ಮೊಸಳೆಯ ತಲೆಯನ್ನ ತೋರಿಸುತ್ತಾರೆ. ಈ ಮೊಸಳೆಯ ದೊಡ್ಡದಾದ ಮುಖ ಹಾಗೂ ಕಣ್ಣು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬೇಟೆಯಾಡುವ ಸಲುವಾಗಿ ಮೊಸಳೆಗಳು ಈ ರೀತಿ ಕಣ್ಣನ್ನ ಅಗಲ ಮಾಡಿ ಕುಳಿತಿರುತ್ತವೆ ಎಂದು ತಜ್ಞರು ಹೇಳುತ್ತಾರೆ. ಅಂದಹಾಗೆ ಮೊಸಳೆಗೆ ಮನುಷ್ಯರಷ್ಟು ಸ್ಪಷ್ಟವಾಗಿ ದೃಷ್ಟಿ ಶಕ್ತಿ ಇರೋದಿಲ್ವಂತೆ.
ಉತ್ತರ ಕ್ವೀನ್ಸ್ಲ್ಯಾಂಡ್ನಲ್ಲಿ ಮೊಸಳೆಗಳು ಸಾಮಾನ್ಯವಾಗಿ ಕಾಣಸಿಗುತ್ತದೆ. ಮೊಸಳೆಗಳು ಹೆಚ್ಚಾಗಿ ಕಾಣ ಸಿಗುವ ದೇಶಗಳಲ್ಲಿ ನಿಮ್ಮ ಹತ್ತಿರದಲ್ಲೆಲ್ಲೂ ಮೊಸಳೆ ಕಂಡಿಲ್ಲ ಅಂದ ಮಾತ್ರಕ್ಕೆ ಮೊಸಳೆಯೇ ಇಲ್ಲ ಎಂದುಕೊಳ್ಳುವ ಹಾಗಿಲ್ಲ. ಏಕೆಂದರೆ ಮೊಸಳೆಗಳು ತಮ್ಮ ಬೇಟೆಗಾಗಿ ಗಂಟೆಗಟ್ಟಲೇ ಒಂದೇ ಸ್ಥಿತಿಯಲ್ಲೇ ಇದ್ದು ಕಾಯುವ ಸಾಮರ್ಥ್ಯ ಹೊಂದಿದೆ.