ಈ ಕಾಲದಲ್ಲಿ ಹದಿನಾರು ವರ್ಷದ ಹುಡುಗಿ ತನ್ನ ತಂದೆಯೊಂದಿಗೆ ಸುರಕ್ಷಿತವಾಗಿದ್ದಾಗ ಮತ್ತು ತನ್ನ ತಾಯಿಯೊಂದಿಗೆ ಮಾತನಾಡಲು ಬಯಸದಿದ್ದಾಗ, ನ್ಯಾಯಾಲಯ ಆ ಹುಡುಗಿಯನ್ನ ತನ್ನ ತಾಯಿಯೊಂದಿಗೆ ಮಾತನಾಡು ಎಂದು ಬಲವಂತಪಡಿಸಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್ ತಾಯಿಯೊಬ್ಬರನ್ನ ಪ್ರಶ್ನೆ ಮಾಡಿದೆ. ತನ್ನ ಪತಿ, ಇಬ್ಬರು ಹೆಣ್ಣುಮಕ್ಕಳ ಮನಸ್ಸಿನಲ್ಲಿ ನನ್ನ ಬಗ್ಗೆ ವಿಷ ತುಂಬಿದ್ದಾರೆ, ನನಗೆ ನನ್ನ ಮಕ್ಕಳ ಕಸ್ಟಡಿ ಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ತಾಯಿ ಮೂಲತಃ ಅಮೇರಿಕಾದ ನಿವಾಸಿ.
2017ರಲ್ಲಿ ವಿಚ್ಛೇದನ ಮೊಕದ್ದಮೆ ಹೂಡಿದ ನಂತರ, 2019ರಲ್ಲಿ ಆಕೆಯ ಪತಿ ಇಬ್ಬರು ಹೆಣ್ಣುಮಕ್ಕಳನ್ನು ಅಮೇರಿಕಾದಿಂದ ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಭಾರತದಲ್ಲೆ ನೆಲೆಸಿದ್ದಾರೆ. ಅವರು ಭಾರತಕ್ಕೆ ಬಂದಾಗ ಆ ಮಕ್ಕಳಿಗೆ 15 ಮತ್ತು 13 ವರ್ಷ ವಯಸ್ಸಾಗಿತ್ತು. ಅಂದಿನಿಂದ ದೂರವಾಣಿ ಕರೆಗಳಲ್ಲಾಗಲಿ, ವಿಡಿಯೋ ಕರೆಗಳಲ್ಲಾಗಲಿ ಮಕ್ಕಳೊಂದಿಗೆ ಮಾತನಾಡಲು ತಾಯಿ ಹೆಣಗಾಡುತ್ತಿದ್ದಾರೆ ಎಂದು ತಾಯಿಯ ಪರ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದಾರೆ.
ಇನ್ನು ಪತಿಯ ಪರ ವಾದ ಮಂಡಿಸಿರುವ ವಕೀಲ ಸಿದ್ಧಾರ್ಥ್ ಭಟ್ನಾಗರ್, ಇಬ್ಬರಲ್ಲಿ ಒಬ್ಬ ಹೆಣ್ಣು ಮಗಳು ಪ್ರಾಪ್ತ ವಯಸ್ಕಳಾಗಿದ್ದು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇನ್ನೊಬ್ಬಳಿಗೆ ಈಗ 16 ವರ್ಷ, ಆಕೆಗೆ ತಾಯಿಯೊಂದಿಗೆ ಮಾತನಾಡಲು ಇಷ್ಟವಿಲ್ಲ. ಈ ಸಂದರ್ಭದಲ್ಲಿ ತಂದೆಯಾಗಿ ಇವರು ಏನು ಮಾಡಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಿರಿಯ ಹುಡುಗಿಗೆ 16 ವರ್ಷ, 16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾರಾದರೂ, ಅವರಿಗೆ ಯಾವುದು ಒಳ್ಳೆಯದು ಎಂಬುದನ್ನು ನಿರ್ಧರಿಸುವಷ್ಟು ಸ್ಥೈರ್ಯ ಹೊಂದಿರುತ್ತಾರೆ. ತಂದೆಯು 16 ವರ್ಷದ ಮಗುವಿಗೆ ಇಲ್ಲಸಲ್ಲದ ಬೋಧನೆ ಮಾಡಬಹುದು ಎಂದು ನೀವು ಭಾವಿಸುತ್ತೀರಾ ? ಕಳೆದ ವರ್ಷ ಎಷ್ಟು ಬಾರಿ ಹೆಣ್ಣು ಮಕ್ಕಳೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದ್ದೀರಿ ಎಂದು ನ್ಯಾಯಾಲಯ ತಾಯಿಯನ್ನು ಕೇಳಿದೆ. ನಾವು ಅವರ ಕೈ ಹಿಡಿದು ಬಲವಂತವಾಗಿ ನಿನ್ನ ತಾಯಿಯೊಂದಿಗೆ ಮಾತನಾಡು ಎಂದು ಒತ್ತಾಯಿಸಲು ಸಾಧ್ಯವಿಲ್ಲ. ಮಕ್ಕಳು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಯೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ, ಎಂದು ಸಿಜೆಐ ನೇತೃತ್ವದ ಪೀಠ ಹೇಳಿದೆ.
ಆನಂತರ ಹೆಣ್ಣುಮಕ್ಕಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಲು ವ್ಯವಸ್ಥೆ ಮಾಡಬಹುದೇ ಎಂದು ಆಕೆಯ ಪತಿಗೆ ನ್ಯಾಯಾಲಯ ಕೇಳಿದೆ. ಯಾವುದೇ ಆದೇಶಗಳನ್ನು ರವಾನಿಸುವ ಅಗತ್ಯವಿಲ್ಲ ಮತ್ತು ನಾನೇ ವಿಡಿಯೋಕಾನ್ಫರೆನ್ಸ್ ಗೆ ಬುಧವಾರ ವ್ಯವಸ್ಥೆ ಮಾಡುತ್ತೇನೆ ಎಂದು ಪತಿಯ ಪರ ವಕೀಲ ಭಟ್ನಾಗರ್ ಹೇಳಿದ್ದಾರೆ. ಈ ಮೊದಲು ಅಂದ್ರೆ ಕಳೆದ ವರ್ಷ, ಇಬ್ಬರು ಹೆಣ್ಣುಮಕ್ಕಳೊಂದಿಗೆ ಸಂವಾದ ನಡೆಸಿದ ನಂತರ, ಬಾಂಬೆ ಹೈಕೋರ್ಟ್ ಕೂಡ ಮಹಿಳೆಯ ಮನವಿಯನ್ನು ತಿರಸ್ಕರಿಸಿತ್ತು.