ರಂಗೋಲಿ ನಮ್ಮ ಭಾರತೀಯ ಸಂಸ್ಕೃತಿಯ ಕುರುಹು, ಶುಭ ಸೂಚಕ. ಎಳೆ ರಂಗೋಲಿ, ಚುಕ್ಕಿ ರಂಗೋಲಿಯ ಹಾಗೆ ಇನ್ನೂ ಅನೇಕ ಬಗೆ ಬಗೆಯ ರಂಗೋಲಿಗಳು ಚಾಲ್ತಿಯಲ್ಲಿ ಇದೆ.
ಆಧುನಿಕ ನಾರಿಮಣಿಗಳಿಗೆ ಇತ್ತ ಸಂಪ್ರದಾಯವನ್ನೂ ಪಾಲಿಸಬೇಕು ಅತ್ತ ಕೆಲಸಕ್ಕೂ ಹೋಗಬೇಕು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅನೇಕ ಹೆಣ್ಣು ಮಕ್ಕಳು ರಾತ್ರಿ ವೇಳೆಯೇ ಬಾಗಿಲಿನ ಮುಂದೆ ನೀರು ಹಾಕಿ ರಂಗೋಲಿ ಹಾಕುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗಿದೆ.
ರಾತ್ರಿ ವೇಳೆ ರಂಗೋಲಿ ಹಾಕಬಹುದೇ? ಇದು ಎಷ್ಟೋ ಮಹಿಳೆಯರನ್ನು ಕಾಡುವ ಪ್ರಶ್ನೆ. ಸಾಮಾನ್ಯವಾಗಿ ಸೂರ್ಯೋದಯಕ್ಕೆ ಮೊದಲು ಮನೆಯ ಮುಂದೆ ನೀರು ಹಾಕಿ ರಂಗೋಲಿ ಹಾಕುವ ಪರಿಪಾಠ. ಇದಕ್ಕೆ ಮುಖ್ಯ ಕಾರಣ ಸೂರ್ಯ ಹುಟ್ಟಿದ ನಂತರ ಜನರ ಚಟುವಟಿಕೆಗಳೂ ಚುರುಕಾಗುತ್ತದೆ.
ಹಿಂದೆಲ್ಲಾ ಹಳ್ಳಿಗಳಲ್ಲಿ ಮಣ್ಣಿನ ನೆಲವೇ ಇರುತ್ತಿತ್ತು. ಇದರಿಂದ ಧೂಳು ಎದ್ದು ಗಾಳಿಯಲ್ಲಿ ಬೆರೆತು ಉಸಿರಾಟಕ್ಕೆ ತೊಂದರೆ ಆಗುವ ಸಾಧ್ಯತೆಯನ್ನು ಮನಗಂಡು ಸೂರ್ಯೋದಯಕ್ಕೆ ಮೊದಲು ಸಗಣಿ ನೀರನ್ನು ಚಿಮುಕಿಸಿ ರಂಗೋಲಿ ಇಡುವುದು ವಾಡಿಕೆ ಆಗಿತ್ತು.
ಈಗಲೂ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಧೂಳು ಅತಿ ಹೆಚ್ಚಾಗಿ ತುಂಬಿದೆ. ಗೋಮಯದಿಂದ ಅಲ್ಲದೆ ಹೋದರೂ ಬರಿಯ ನೀರಿನಿಂದ ಮುಂಬಾಗಿಲನ್ನು ಬೆಳಗ್ಗೆಯೇ ಸ್ವಚ್ಛಗೊಳಿಸಿ ರಂಗೋಲಿ ಇಡುವುದು ಉತ್ತಮ.