alex Certify ʼಹಣʼ ದಿಂದ ಖರೀದಿಸಬಹುದಾ ಸಂತಸ ? ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಣʼ ದಿಂದ ಖರೀದಿಸಬಹುದಾ ಸಂತಸ ? ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ದುಡ್ಡು ನಿಮಗೆ ಸಂತಸ ತರಬಲ್ಲದೇ ಎನ್ನುವ ಹಳೆಯ ಪ್ರಶ್ನೆಗೆ ಉತ್ತರ ಪತ್ತೆ ಮಾಡಲು ಹೊರಟ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಹಾಗೂ ಮನಃಶಾಸ್ತ್ರಜ್ಞರಾದ ಡೇನಿಯಲ್ ಕಹ್ನೇಮನ್ ಹಾಗೂ ಪೆನ್ಸಿಲ್ವೇನಿಯಾ ವಿವಿಯ ಹಿರಿಯ ಸಂಶೋಧಕ ಮ್ಯಾಥ್ಯೂ ಕಲ್ಲಿಂಗ್ಸ್‌ವರ್ಥ್ ಬಹಳ ಆಸಕ್ತಿದಾಯಕ ಉತ್ತರವೊಂದನ್ನು ಕಂಡುಕೊಂಡಿದ್ದಾರೆ.

ಜನರಿಗೆ ತಮ್ಮ ಆದಾಯ ಜೋರಾಗುತ್ತಾ ಸಾಗಿದಂತೆ ಅವರಲ್ಲಿನ ಸಂತಸದ ಮಟ್ಟ ಹೆಚ್ಚುತ್ತಲೇ ಸಾಗುತ್ತದೆ ಎನ್ನುವ ಇವರ ಅಧ್ಯಯನ ವರದಿಯು, ಆ ಆದಾಯದ ಮಟ್ಟ $75,000 (61 ಲಕ್ಷ ರೂ.ಗಳು) ತಲುಪುತ್ತಲೇ ಸಂತೃಪ್ತಿಯ ಮಟ್ಟ ತಲುಪುವುದಾಗಿ 2010ರಲ್ಲಿ ’ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ನಲ್ಲಿ ಪ್ರಕಟಗೊಂಡ ಅಧ್ಯಯನದಲ್ಲಿ ತಿಳಿಸಿದ್ದರು.

ಆದರೆ ಇದೇ ವಿಚಾರವಾಗಿ ಹೊಸದೊಂದು ಅಧ್ಯಯನ ನಡೆಸಿರುವ ಈ ಇಬ್ಬರೂ ಸಂಶೋಧಕರು, ಸಂತಸದ ಮಟ್ಟವು $75,000ಗಳಷ್ಟು ಆದಾಯದ ಮಟ್ಟ ತಲುಪುತ್ತಲೇ ಸಂತೃಪ್ತವಾಗುವುದಿಲ್ಲ, ಬದಲಾಗಿ $200,000 (ಒಂದು ಕೋಟಿ ರೂ.) ಮೀರಿ ಸಂಪಾದನೆ ಆದಾಗಲೂ ಸಹ ಹೆಚ್ಚುತ್ತಲೇ ಸಾಗುತ್ತದೆ ಎಂದಿದ್ದಾರೆ.

ತಮ್ಮ ಈ ಅಧ್ಯಯನವನ್ನು ಕಾಲಕಾಲಿಕ ಹಣದುಬ್ಬರದೊಂದಿಗೆ ವಿಶ್ಲೇಷಣೆ ಮಾಡಿರುವ ಈ ಇಬ್ಬರೂ, 18 ರಿಂದ 65 ವರ್ಷ ವಯಸ್ಸಿನೊಳಗಿನ 33,391 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ. ವಿವಿಧ ಹಂತಗಳ ವಾರ್ಷಿಕ ವರಮಾನ ಇರುವ ಮಂದಿಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ.

ಈ ಸಮೀಕ್ಷೆಗೆಂದೇ ಕಲ್ಲಿಂಗ್ಸ್‌ವರ್ಥ್ ಅವರು ವಿಶೇಷವಾಗಿ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ಒಂದರ ಮೂಲಕ ಜನರಿಗೆ ದಿನ ಬೇರೆ ಬೇರೆ ಅವಧಿಗಳಲ್ಲಿ ಯಾವ ರೀತಿ ಭಾವನೆಗಳಿರುತ್ತವೆ ಎಂದು ವರದಿ ಮಾಡಲು ಸೂಚಿಸಲಾಗಿತ್ತು.

ಬಹುತೇಕ ಜನರಿಗೆ, ದೊಡ್ಡ ಮಟ್ಟದ ವರಮಾನ ಇರುವವರಿಗೂ, ಸಂತಸದ ಮಟ್ಟದಲ್ಲಿನ ಏರಿಕೆಯು ಅವರವರ ವರಮಾನಗಳ ಏರಿಕೆಯನ್ನು ಅವಲಂಬಿಸಿದೆ ಎಂದು ತಿಳಿದು ಬಂದಿದೆ.

ಆದರೆ ಇದೇ ವೇಳೆ, ಸಮೀಕ್ಷೆಯಲ್ಲಿ ಭಾಗಿಯಾದವರು ಪೈಕಿ 20% ಮಂದಿ ತಮ್ಮ ನೋವುಗಳನ್ನು ದುಡ್ಡಿನಿಂದ ಶಮನಗೊಳಿಸಲಾಗುವುದಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ. ಮಾನಸಿಕ ಆಘಾತ, ನೋವು, ಶೋಕಗಳಂಥ ಸಮಸ್ಯೆಗಳಿರುವ ಮಂದಿಗೆ ಆದಾಯದಲ್ಲಿ ಏರಿಕೆ ಕಂಡು ಬಂದರೂ ಸಹ ಹೇಳಿಕೊಳ್ಳುವ ಮಟ್ಟದಲ್ಲಿ ಈ ಬಗ್ಗೆ ಸಂತಸವೇನೂ ಹೆಚ್ಚುವುದಿಲ್ಲ ಎಂಬುದು ತಿಳಿದು ಬಂದಿದೆ.

ಜೀವನದಲ್ಲಿ ಸಂತಸ ಹೆಚ್ಚಲು ದುಡ್ಡೇ ಎಲ್ಲವೂ ಅಲ್ಲ ಎನ್ನುವ ಕಿಲ್ಲಿಂಗ್ಸ್‌ವರ್ಥ್, ಆದರೆ ಸಂತಸವಾಗಿರಲು ದುಡ್ಡು ಒಂದು ಮಟ್ಟಕ್ಕೆ ಸಹಾಯ ಮಾಡುತ್ತದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...