ನವದೆಹಲಿ: ಪತ್ನಿಗೆ ಗೊತ್ತಾಗದಂತೆ ಆಕೆಯ ದೂರವಾಣಿ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಖಾಸಗೀತನದ ಉಲ್ಲಂಘನೆಯಾಗುತ್ತದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಸರ್ವೋಚ್ಚನ್ಯಾಯಾಲಯ ಸಮ್ಮತಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ನ್ಯಾಯಪೀಠದಲ್ಲಿ ಈ ಕುರಿತಾದ ಅರ್ಜಿಯ ವಿಚಾರಣೆ ನಡೆದು ನೋಟಿಸ್ ಜಾರಿ ಮಾಡಲಾಗಿದೆ.
ಪತ್ನಿಯಿಂದ ವಿಚ್ಛೇದನ ಕೋರಿ 2017ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ತನ್ನ ಹಾಗೂ ತನ್ನ ಪತ್ನಿಯ ನಡುವೆ ನಡೆದ ಸಂಭಾಷಣೆಗಳು ಇದ್ದ ಸಿಡಿ ನೀಡಿದ್ದರು. ಇದರಲ್ಲಿನ ಧ್ವನಿ ಮಹಿಳೆಯದೇ ಎಂದು ದೃಢಪಡಿಸಲು ಕೌಟುಂಬಿಕ ನ್ಯಾಯಾಲಯ ಅವಕಾಶ ಕಲ್ಪಿಸಿದ್ದು, ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
2021 ರ ಡಿಸೆಂಬರ್ 12 ರಂದು ಪಂಜಾಬ್ -ಹರಿಯಾಣ ಹೈಕೋರ್ಟ್, ಪತ್ನಿಗೆ ಗೊತ್ತಾಗದಂತೆ ಆಕೆಯೊಂದಿಗಿನ ಸಂಭಾಷಣೆ ರೆಕಾರ್ಡ್ ಮಾಡುವುದು ಖಾಸಗಿತನದ ಉಲ್ಲಂಘನೆಯಾಗುತ್ತದೆ ಎಂದು ಆದೇಶ ನೀಡಿತ್ತು.
ವ್ಯಕ್ತಿ ಪಂಜಾಬ್ -ಹರಿಯಾಣ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದೂರವಾಣಿ ಸಂಭಾಷಣೆಯನ್ನು ಆಕೆಗೆ ಗೊತ್ತಾಗದಂತೆ ಮಾಡುವುದು ಉಲ್ಲಂಘನೆ ಆಗುತ್ತದೆಯೇ ಎಂಬುದನ್ನು ಪರಿಶೀಲನೆ ನಡೆಸಲು ಸಮ್ಮತಿಸಿದೆ.