ಚೆನ್ನೈ: ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎರಡನೇ ಬಾರಿಯೂ ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಆತನ ತಂದೆ ಕೂಡ ಸಾವಿಗೆ ಶರಣಾದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿತ್ತು. ಈ ದುರಂತಗಳ ಬಳಿಕ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ಮಾಡದೇ ಆತ್ಮಸ್ಥೈರ್ಯದಿಂದ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ವೈದ್ಯಕೀಯ ಆಕಾಂಕ್ಷಿ ಅಭ್ಯರ್ಥಿಗಳಿಗೆ ಮಹತ್ವದ ಭರವಸೆಯೊಂದನ್ನು ನೀಡಿದ್ದಾರೆ.
ನೀಟ್ ವಿದ್ಯಾರ್ಥಿ ಜಗದೀಶ್ವರ್ ಹಾಗೂ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಘಾತ ತಂದಿದೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಹೇಗೆ ಸಾಂತ್ವನ ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ಚೆನ್ನಾಗಿ ಓದುತ್ತಿದ್ದ ಮಗನನ್ನು ವೈದ್ಯನನ್ನಾಗಿ ನೋಡಬೇಕು ಎಂದು ಹೆತ್ತವರು ಬಯಸಿದ್ದರು. ಆದರೆ ಜಗದೀಶ್ವರ್ ನೀಟ್ ಪರೀಕ್ಷೆಯ ಬಲಿಪೀಠದ ಮೇಲೆ ಬಲಿಯಾದವರ ಪಟ್ಟಿಗೆ ಸೇರಿಕೊಂಡಿದ್ದಾನೆ. ಇದು ಅತ್ಯಂತ ಭಯಾನಕ ಘಟನೆಯಾಗಿದೆ. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ನೀಟ್ ನಿಂದಾಗಿ ಆತ್ಮಹತ್ಯೆ ಹೆಚ್ಚು ವರದಿಯಾಗುತ್ತಿದೆ ಎಂದು ಸ್ಟಾಲಿನ್ ಕಳವಳ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಬಾರದು. ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿರುವ NEETನ್ನು ರದ್ದುಗೊಳಿಸಲಾಗುವುದು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾನೂನು ಉಪಕ್ರಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ನೀಟ್ ನ ಬಲಿಪೀಠದ ಮೇಲೆ ಜಗದೀಶ್ವರ್ ಹಾಗೂ ಅವರ ತಂದೆಯ ಸಾವು ಕೊನೇ ಪ್ರಕರಣವಾಗಿರಲಿ. ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಾದಿದೆ. ಆತ್ಮಸ್ಥೈರ್ಯದಿಂದ ಇರಿ. ಬದುಕಿ ಮತ್ತು ಇತರರನ್ನು ಬದುಕಲು ಬಿಡಿ. ಆತ್ಮಹತ್ಯಾ ಪ್ರವೃತ್ತಿ ಬೆಳೆಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.