ಸಾಮಾನ್ಯವಾಗಿ ಎಲ್ಲರೂ ಬಿಸಿಲಿಗೆ ಹೋಗುವ ಮುನ್ನ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚುತ್ತೇವೆ. ಸ್ಕ್ವಾಮಸ್ ಸೆಲ್ ಕ್ಯಾನ್ಸರ್ ಮತ್ತು ಮೆಲನೋಮಾ ಸೇರಿದಂತೆ ಚರ್ಮದ ಕ್ಯಾನ್ಸರ್‌ಗಳಿಗೆ ಕಾರಣವಾಗಬಲ್ಲ ನೇರಳಾತೀತ (ಯುವಿ) ವಿಕಿರಣದ ಹಾನಿಕಾರಕ ಪರಿಣಾಮಗಳಿಂದ ನಮ್ಮ ಚರ್ಮವನ್ನು ರಕ್ಷಿಸುವಲ್ಲಿ ಸನ್‌ಸ್ಕ್ರೀನ್ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ತೆಳುವಾದ ಓಝೋನ್ ಪದರದಂತಹ ಅಂಶಗಳಿಂದಾಗಿ ಯುವಿ ಹೆಚ್ಚಿರುವ ಪ್ರದೇಶಗಳಲ್ಲಿ ಸನ್‌ಸ್ಕ್ರೀನ್ ಅತ್ಯಂತ ಪರಿಣಾಮಕಾರಿ ಎನಿಸಿದೆ.
ಆದರೆ ಈ ಸನ್‌ಸ್ಕ್ರೀನ್ ಕೂಡ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬ ವರದಿಗಳು ಇತ್ತೀಚೆಗೆ ಮುನ್ನೆಲೆಗೆ ಬಂದಿವೆ. ಅಧ್ಯಯನಗಳ ಪ್ರಕಾರ ಕೆಲವು ಸನ್‌ಸ್ಕ್ರೀನ್‌ಗಳಲ್ಲಿ ಹೆಚ್ಚಿನ ಸಾಂದ್ರತೆಯ ಬೆಂಜೀನ್ (ಕ್ಯಾನ್ಸರ್‌ಗೆ ಕಾರಣವಾಗುವ ಟಾಕ್ಸಿನ್) ಕಂಡುಬಂದಿದೆ. ಹಾಗಾಗಿ ಸನ್‌ಸ್ಕ್ರೀನ್‌ಗಳು ಕೂಡ ಹಾನಿಕಾರಕವೇ ಎಂಬ ಭಯ ಕಾಡುತ್ತಿದೆ. ತಜ್ಞರ ಪ್ರಕಾರ ಕೆಲವು ಸನ್‌ಸ್ಕ್ರೀನ್‌ಗಳಲ್ಲಿ ಹೆಚ್ಚಿನ ಮಟ್ಟದ ಬೆಂಜೀನ್ ಇದೆ.
ಬೆಂಜೀನ್ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕವಾಗಿರುವುದರಿಂದ ಅದನ್ನು ಬಳಸುವುದು ಅಪಾಯಕಾರಿ. ಇದು ಮಾರುಕಟ್ಟೆಯಲ್ಲಿರುವ ಎಲ್ಲಾ ಸನ್‌ಸ್ಕ್ರೀನ್‌ಗಳಲ್ಲಿಲ್ಲ. ಇದನ್ನು ಪತ್ತೆ ಮಾಡಲು ಎಲ್ಲಾ ಸನ್‌ಸ್ಕ್ರೀನ್‌ಗಳನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೂರ್ಯನಿಂದ ಬರುವ ಯುವಿ ಕಿರಣಗಳು ಕಾರ್ಸಿನೋಜೆನ್ ಮತ್ತು ಚರ್ಮದ ಕ್ಯಾನ್ಸರ್‌ಗೆ ಪ್ರಮುಖ ಕಾರಣ.
ಸನ್‌ಸ್ಕ್ರೀನ್‌ನ ನಿಯಮಿತ ಬಳಕೆಯು ಯುವಿ ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ಗುಣಮಟ್ಟದ ಉತ್ತಮ ಬ್ರಾಂಡ್‌ಗಳ ಸನ್‌ಸ್ಕ್ರೀನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಚರ್ಮ ತಜ್ಞರ ಸಲಹೆಯ ಮೇರೆಗೆ ಸನ್‌ಸ್ಕ್ರೀನ್ ಖರೀದಿಸುವುದು ಇನ್ನೂ ಉತ್ತಮ.