
ವಾಟ್ಸಾಪ್ ಗ್ರೂಪ್ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಅಲ್ಲಿ ಬಾಲಕನೊಬ್ಬ ಕಾರಿನ ವಿಂಡ್ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುತ್ತಿರುವಾಗ ಇಬ್ಬರು ವ್ಯಕ್ತಿಗಳು ಕಾರಿನೊಳಗಿನಿಂದ ವಿಡಿಯೋ ಚಿತ್ರೀಕರಿಸಿದ್ದಾರೆ. ಬಾಲಕ ತನ್ನ ಕೈಯಲ್ಲಿ ದೊಡ್ಡ ಸ್ಮಾರ್ಟ್ವಾಚ್ನಂತಹ ಸಾಧನವನ್ನು ಸಹ ಧರಿಸಿದ್ದಾನೆ. ವಿಂಡ್ಸ್ಕ್ರೀನ್ ಅನ್ನು ಒರೆಸುವಾಗ, ಬಾಲಕ ಮಧ್ಯಕ್ಕೆ ಹಾರಿ, ತನ್ನ ಮಣಿಕಟ್ಟನ್ನು ತಿರುಗಿಸಿದ್ದಾನೆ. ಮತ್ತು ಕಾರಿನ ಫಾಸ್ಟ್ಟ್ಯಾಗ್ ಸ್ಟಿಕ್ಕರ್ ಅನ್ನು ಸ್ಕ್ಯಾನ್ ಮಾಡಿದ್ದಾನೆ.
ಬಳಿಕ ಹಣ ತೆಗೆದುಕೊಳ್ಳದೆಯೇ ಬಾಲಕ ಹೊರಡುತ್ತಿದ್ದಂತೆ ಡ್ರೈವರ್ ಸೀಟಿನಲ್ಲಿದ್ದ ವ್ಯಕ್ತಿ ಕಾರನ್ನು ಕ್ಲೀನ್ ಮಾಡಲು ಹಣ ತೆಗೆದುಕೊಳ್ಳದೆ ಏಕೆ ಹೊರಟಿದ್ದೀಯಾ? ಎಂದು ಕೇಳುತ್ತಾನೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಬಾಲಕನನ್ನು ಹಿಡಿಯಲು ಪ್ರಯತ್ನಿಸಿದ್ರೂ ಸಾಧ್ಯವಾಗುವುದಿಲ್ಲ.
ಇನ್ನು ಈ ಬಗ್ಗೆ ಮಾತನಾಡಿದ ಕಾರು ಚಾಲಕ, ಈ ಕ್ಲೀನರ್ಗಳು ಕಾರುಗಳ ಫಾಸ್ಟ್ಟ್ಯಾಗ್ ಸ್ಟಿಕ್ಕರ್ಗಳನ್ನು ಸ್ಕ್ಯಾನ್ ಮಾಡುತ್ತಾರೆ. ನಂತರ ತಮ್ಮ ಪೇಟಿಎಂ ಫಾಸ್ಟ್ಟ್ಯಾಗ್ ಖಾತೆಯಿಂದ ಎಲ್ಲಾ ಹಣವನ್ನು ಕಡಿತಗೊಳಿಸುವುದರ ಕುರಿತು ತಮ್ಮ ಫೋನ್ನಲ್ಲಿ ಮೆಸೇಜ್ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ನಕಲಿ ಫಾಸ್ಟ್ಟ್ಯಾಗ್ ಹಗರಣದ ವಿಡಿಯೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದ್ದು, 24 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ.
ಆರೋಪದ ಹಿಂದಿನ ಸತ್ಯವೇನು?
ವೈರಲ್ ವಿಡಿಯೋದೊಂದಿಗೆ ಟ್ವೀಟ್ಗಳಿಗೆ ಪ್ರತ್ಯುತ್ತರ ನೀಡಿದ ಫಾಸ್ಟ್ಟ್ಯಾಗ್, ನೋಂದಾಯಿತ ವ್ಯಾಪಾರಿಗಳು ಅಂದರೆ ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ಆಪರೇಟರ್ಗಳು ಆಯಾ ಜಿಯೋ ಸ್ಥಳಗಳಿಂದ ಮಾತ್ರ ವಹಿವಾಟು ಪ್ರಾರಂಭಿಸಬಹುದಾದ್ದರಿಂದ ಅಂತಹ ಹಗರಣವು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಯಾವುದೇ ಅನಧಿಕೃತ ಸಾಧನವು ಫಾಸ್ಟ್ಟ್ಯಾಗ್ ನಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಮತ್ತು ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಫಾಸ್ಟ್ಟ್ಯಾಗ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಕೂಡ ನಕಲಿ ಹಗರಣದ ಬಗ್ಗೆ ಟ್ವೀಟ್ ಮಾಡಿದೆ. ಅಂತಹ ವಹಿವಾಟುಗಳು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದ್ದರಿಂದ, ವಾಹನಗಳ ಮೇಲೆ ಫಾಸ್ಟ್ಟ್ಯಾಗ್ ಅನ್ನು ಸ್ವೈಪ್ ಮಾಡಲು ವಾಚ್ಗಳಂತಹ ಸಾಧನಗಳನ್ನು ಬಳಸಲಾಗುತ್ತಿದೆ ಎಂಬ ವೈರಲ್ ವಿಡಿಯೋದಲ್ಲಿ ಮಾಡಿದ ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು.