
ಮೈಸೂರು: ವರುಣಾ, ಟಿ. ನರಸೀಪುರ ಕ್ಷೇತ್ರಗಳ ವಿವಿಧೆಡೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಚಾರ ನಡೆಸಿದ್ದಾರೆ. ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವ ವಿ. ಸೋಮಣ್ಣ ಪರವಾಗಿ ಪ್ರಚಾರ ನಡೆಸಿದ್ದಾರೆ.
ಮೇ 13 ರಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ದೊಡ್ಡ ಆಘಾತ ಕಾದಿದೆ ಎಂದು ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ವಿಜಯೇಂದ್ರ ಹೇಳಿದ್ದಾರೆ. ನನ್ನ ಉಸಿರು ಇರುವವರೆಗೂ ವರುಣಾ ಜನರನ್ನು ಕೈ ಬಿಡುವುದಿಲ್ಲ. ಪಕ್ಷಕ್ಕಾಗಿ ಹಗಲಿರುಳು ಎಲ್ಲರೂ ದುಡಿಯೋಣ. ಈ ಬಾರಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾವ ದುಷ್ಟ ಶಕ್ತಿಯೋ ಇದನ್ನು ತಡೆಯಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಯಡಿಯೂರಪ್ಪನವರ ಕನಸಾಗಿದೆ. ಟಿ. ನರಸೀಪುರ ಕ್ಷೇತ್ರದ ಅಭಿವೃದ್ಧಿಗೆ ಡಾ. ರೇವಣ್ಣ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ದಿವಾಳಿಯಾಗಿದೆ. ಯಾರಿಗೂ ಬಹುಮತ ಬರಬಾರದೆಂದು ಜೆಡಿಎಸ್ ಕನಸು ಕಾಣುತ್ತಿದೆ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಯಡಿಯೂರಪ್ಪ ಮುಖ್ಯಮಂತ್ರಿ ಅಲ್ಲ. ಪಕ್ಷದ ರಾಜ್ಯಾಧ್ಯಕ್ಷರೂ ಅಲ್ಲ, 81 ವರ್ಷವಾದರೂ ಪಕ್ಷ ಅಧಿಕಾರಕ್ಕೆ ತರಲು ರಾಜ್ಯ ಸುತ್ತುತ್ತಿದ್ದಾರೆ ಎಂದು ಟಿ. ನರಸೀಪುರದಲ್ಲಿ ವಿಜಯೇಂದ್ರ ಹೇಳಿದ್ದಾರೆ.