ಕಾಂಬೋಡಿಯಾದ ಪುಟ್ಟ ಮೂಷಿಕ ಅಪಾಯಕಾರಿ ಗಣಿ ಮತ್ತು ಸ್ಫೋಟಕವನ್ನು ಪತ್ತೆ ಹಚ್ಚಿದ್ದಕ್ಕಾಗಿ ಚಿನ್ನದ ಪದಕ ಗೆದ್ದಿದ್ದ ಇಲಿ ಮಗವಾ ತನ್ನ 8ನೇ ವಯಸ್ಸಿನಲ್ಲಿ ನಿಧನ ಹೊಂದಿದೆ.
ಆಫ್ರಿಕನ್ ನ ಇಲಿ ತನ್ನ ಸೇವೆಯ ಸಮಯದಲ್ಲಿ 100ಕ್ಕೂ ಹೆಚ್ಚು ನೆಲಬಾಂಬುಗಳು ಮತ್ತು ಇತರ ಸ್ಫೋಟಕಗಳನ್ನು ಕಂಡು ಹಿಡಿದಿತ್ತು. ಜಾರ್ಜ್ ಕ್ರಾಸ್‌ಗೆ ಸಮಾನವಾದ ಪ್ರಾಣಿಯಾದ ಯುಕೆ ಪಿಡಿಎಸ್‌ಎ ಚಿನ್ನದ ಪದಕವನ್ನು ಪಡೆದ ಮೊದಲ ಇಲಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.
ಈ ವಾರಾಂತ್ಯದಲ್ಲಿ ಹೀರೋ ರ್ಯಾಟ್ ಮಗವಾ ನಿಧನ ಹೊಂದಿದೆ ಎಂಬ ದುಃಖದ ಸುದ್ದಿಯನ್ನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ ಎಂದು ಎಪಿಒಪಿಒ ಸಂಸ್ಥೆ ಹೇಳಿದೆ. ಉತ್ತಮ ಆರೋಗ್ಯವನ್ನು ಹೊಂದಿದ್ದ ಮಗವಾ, ಹೆಚ್ಚಿನ ಸಮಯವನ್ನು ಉಲ್ಲಾಸದಿಂದ ಕಳೆದಿತ್ತು. ಕಳೆದ ವಾರ ಕೂಡ ಎಂದಿನಂತೆ ಉತ್ಸಾಹದಿಂದ ಆಟವಾಡುತ್ತಿತ್ತು. ಆದರೆ, ವಾರಾಂತ್ಯದಲ್ಲಿ ಕಳೆಗುಂದಿದ್ದಂತಿದ್ದ ಮಗವಾ ಹೆಚ್ಚು ನಿದ್ರಿಸುತ್ತಿತ್ತು ಮತ್ತು ಲಘು ಆಹಾರ ಸೇವಿಸುತ್ತಿತ್ತು.
ಎಂಟು ವರ್ಷ ವಯಸ್ಸಿನ ಮಗವಾ ತನ್ನ ಐದು ವರ್ಷಗಳ ವೃತ್ತಿ ಜೀವನದಲ್ಲಿ, 100 ಕ್ಕೂ ಹೆಚ್ಚು ನೆಲಬಾಂಬ್‌ಗಳು ಮತ್ತು ಇತರ ಸ್ಫೋಟಕಗಳನ್ನು ಕಂಡು ಹಿಡಿದಿದೆ. ಮಗವಾ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಮೂಷಿಕ ಮಾಡಿರುವ ಅದ್ಭುತ ಕಾರ್ಯಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಎಪಿಒಪಿಒ ಸಂಸ್ಥೆಯು ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದೆ. ತಾಂಜೇನಿಯಾದಲ್ಲಿ ಹುಟ್ಟಿದ್ದ ಇಲಿ ಮಗವಾ ಅಲ್ಲಿಯೇ ತರಬೇತಿ ಪಡೆದು ಬಳಿಕ 2016ರಲ್ಲಿ ಕಾಂಬೋಡಿಯಾಕ್ಕೆ ತೆರಳಿತ್ತು.