ಲಖ್ನೋ: ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ 10 ನೇ ತರಗತಿಯ 17 ಹುಡುಗಿಯರನ್ನು CBSE ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿ ಶಾಲೆಗೆ ಕರೆಸಿಕೊಂಡು ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ನವೆಂಬರ್ 17 ರ ರಾತ್ರಿ ಪ್ರಾಕ್ಟಿಕಲ್ ಎಕ್ಸಾಂ ನೆಪದಲ್ಲಿ ಶಾಲೆಗೆ ಕರೆಸಿಕೊಳ್ಳಲಾಗಿತ್ತು. ವಿದ್ಯಾರ್ಥಿನಿಯರಿಗೆ ನಿದ್ರಾಜನಕಗಳನ್ನು ಬೆರೆಸಿದ ಆಹಾರವನ್ನು ನೀಡಲಾಯಿತು. ನಂತರ ಶಿಕ್ಷಕರಿಂದ ಕಿರುಕುಳ ನೀಡಲಾಗಿದೆ. ಹುಡುಗಿಯರು ಮರುದಿನ ಮನೆಗೆ ಮರಳಿದ್ದಾರೆ.
ಏನಾಯಿತು ಎಂಬುದನ್ನು ಯಾರಿಗೂ ಹೇಳಬೇಡಿ. ಹೇಳಿದರೆ ಅವರ ಕುಟುಂಬ ಸದಸ್ಯರನ್ನು ಕೊಲ್ಲಲಾಗುವುದು ಎಂದು ಹುಡುಗಿಯರಿಗೆ ಬೆದರಿಕೆ ಹಾಕಲಾಗಿದೆ. ಮೂಲಗಳ ಪ್ರಕಾರ ಹೆಣ್ಣುಮಕ್ಕಳು ಬಡ ಕುಟುಂಬದಿಂದ ಬಂದವರಾಗಿದ್ದಾರೆ.
ಇಬ್ಬರು ಸಂತ್ರಸ್ತರ ಪೋಷಕರು ಪುರ್ಕಾಜಿ ಶಾಸಕ ಪ್ರಮೋದ್ ಉತ್ವಾಲ್ ಅವರನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅವರು ತನಿಖೆಯನ್ನು ಪ್ರಾರಂಭಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಯಾದವ್ ಅವರನ್ನು ಸಂಪರ್ಕಿಸಿದ್ದಾರೆ. ಎಸ್‌ಎಸ್‌ಪಿ ಯಾದವ್ ಪ್ರಕಾರ, ಆರೋಪಗಳು ನಿಜವೆಂದು ಕಂಡುಬಂದಿದೆ.
ಇಬ್ಬರು ವ್ಯಕ್ತಿಗಳ ವಿರುದ್ಧ ಈಗ ಎಫ್‌ಐಆರ್ ದಾಖಲಿಸಲಾಗಿದೆ. ಹುಡುಗಿಯರು ಓದುತ್ತಿರುವ ಶಾಲೆಯ ನಿರ್ದೇಶಕರು ಮತ್ತು ಘಟನೆಯ ರಾತ್ರಿ ಅವರನ್ನು ಕರೆದೊಯ್ದ ಶಾಲೆಯ ನಿರ್ದೇಶಕರ ವಿರುದ್ಧ ಕೇಸ್ ದಾಖಲಿಸಿದ್ದು, ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಿಲ್ಲ.
ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪುರಕಾಜಿ ಪೊಲೀಸ್ ಠಾಣೆಯ ಪ್ರಭಾರಿ ವಿರುದ್ಧ ಇಲಾಖಾ ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ.