ಉದ್ಯೋಗಿಗಳು ಕಚೇರಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆ..? ಕೆಲಸದ ಕಡೆಗೆ ಅವರ ನಿಷ್ಠೆ ಯಾವ ರೀತಿ ಇದೆ ಎಂಬುದನ್ನ ಆಧರಿಸಿ ಮೊದಲೆಲ್ಲ ಬಡ್ತಿ ಹಾಗೂ ಸಂಬಳ ಏರಿಕೆ ಮಾಡಲಾಗುತ್ತಿತ್ತು. ಆದರೆ ಈಗ ವರ್ಕ್ ಫ್ರಮ್ ಹೋಮ್ ಇರೋದ್ರಿಂದ ಉದ್ಯೋಗಿಗಳ ಮೇಲೆ ನಿಗಾ ಇಡೋದು ಮೊದಲಿನಷ್ಟು ಸುಲಭವಲ್ಲ. ಇದಕ್ಕಾಗಿ ಪ್ರಖ್ಯಾತ ಕಾಲ್ ಸೆಂಟರ್ ಕಂಪನಿಯೊಂದು ಉದ್ಯೋಗಿಗಳ ಮನೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ..!
ಟೆಲಿಪರ್ಫಾಮೆನ್ಸ್ ಎಐ – ಚಾಲಿತ ಕ್ಯಾಮರಾಗಳನ್ನು ಉದ್ಯೋಗಿಗಳ ಮನೆಯಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ಅಳವಡಿಸಲು ಯತ್ನಿಸಿದೆ. ವರದಿಗಳ ಪ್ರಕಾರ ಈ ಕಂಪನಿಯು ಮನೆಗಳಲ್ಲಿ ಕ್ಯಾಮರಾ ಅಳವಡಿಸುವಂತೆ ಉದ್ಯೋಗಿಗಳ ಮೇಲೆ ಒತ್ತಡ ಹೇರಿದೆ ಹಾಗೂ ಧ್ವನಿ ಮೇಲ್ವಿಚಾರಕವನ್ನೂ ಅಳವಡಿಸಿ ಮಾತಿನ ಮೇಲೂ ನಿಗಾ ಇಡಲು ಇಚ್ಛಿಸಿದೆ. ಜಾಗತಿಕವಾಹಿ 3 ಲಕ್ಷದ 80 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿಯ ನಿರ್ಧಾರ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಷ್ಠಿತ ಕಂಪನಿಯು ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಉದ್ಯೋಗಿಗಳ ಮೇಲೆ ಒತ್ತಡ ಹೇರಿತ್ತು ಎನ್ನಲಾಗಿದೆ. ಕೊಲಂಬಿಯಾದ ಬೊಗೊಟಾದಲ್ಲಿ ಇದೇ ಕಂಪನಿಯ ಅಡಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯೊಬ್ಬರು ಈ ವಿಚಾರವಾಗಿ ಮಾತನಾಡಿದ್ದು, ನಿಜಕ್ಕೂ ಇದೊಂದು ಕೆಟ್ಟ ಯೋಚನೆಯಾಗಿದೆ. ನಾವು ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ. ಬೆಡ್ರೂಮಿನಲ್ಲಿ ಕೆಲಸ ಮಾಡುತ್ತೇನೆ. ನನ್ನ ಬೆಡ್ರೂಮಿನಲ್ಲಿ ಕ್ಯಾಮರಾ ಅಳವಡಿಸೋಕೆ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಉದ್ಯೋಗ ತಪ್ಪಿ ಹೋಗುತ್ತದೆ ಎಂಬ ಭಯದಲ್ಲಿ ಇಷ್ಟವಿಲ್ಲದೇ ಇದ್ದರೂ ಸಹ 8 ಪುಟಗಳ ಒಪ್ಪಂದದ ಪಟ್ಟಿಗೆ ಸಹಿ ಹಾಕಿರೋದಾಗಿ ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಿಬ್ಬಂದಿ ಮನೆಯಲ್ಲಿ ಕಂಪನಿಯು ಕ್ಯಾಮರಾ ಅಳವಡಿಸಿಲ್ಲ. ಆದರೆ ಸಿಬ್ಬಂದಿಯ ಬಳಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದೆ.
ಎನ್ಬಿಸಿ ನ್ಯೂಸ್ ಪತ್ರಕರ್ತೆ ಒಲಿವಿಯಾ ಸೊಲೋನ್ ಆಗಸ್ಟ್ 8ನೇ ತಾರೀಖಿನಂದು ಮಾಡಿರುವ ಟ್ವೀಟ್ನ ಪ್ರಕಾರ, ವರ್ಕ್ ಫ್ರಮ್ ಹೋಮ್ನಲ್ಲಿರುವ ಸಿಬ್ಬಂದಿಗೆ ಹೆಚ್ಚುವರಿ ಮೇಲ್ವಿಚಾರಣೆ ಮಾಡುತ್ತೇವೆ ಎಂದು ಹೇಳಿರುವ ಕಂಪನಿ ಊಬರ್ ಮಾತ್ರ. ಆ್ಯಪಲ್, ಅಮೆಜಾನ್ಗಳೆರಡೂ ಹೆಚ್ಚುವರಿ ಮೇಲ್ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿವೆ ಎಂದು ಟ್ವೀಟಾಯಿಸಿದ್ದಾರೆ.