ದಕ್ಷಿಣ ಕ್ಯಾಲಿಫೋರ್ನಿಯಾದ ವೆಂಚುರಾದ ಮಹಿಳೆಯೊಬ್ಬರಿಗೆ 46 ವರ್ಷಗಳ ಹಿಂದೆ ಕಳೆದುಹೋಗಿದ್ದ ತಮ್ಮ ವ್ಯಾಲೆಟ್ ಸಿಕ್ಕಿದೆ. ಇಲ್ಲಿನ ಥಿಯೇಟರ್ ಒಂದರ ಮರುವಿನ್ಯಾಸ ಮಾಡುತ್ತಿದ್ದ ನೌಕರರೊಬ್ಬರಿಗೆ ಈ ಪರ್ಸ್ ಸಿಕ್ಕಿದೆ.
“ನಾನು ಇದನ್ನು ಊಹಿಸಲೂ ಸಾಧ್ಯವಿರಲಿಲ್ಲ” ಎಂದು ನೌಕರ ಟಾಮ್ ಸ್ಟೆವನ್ಸ್ ತಿಳಿಸಿದ್ದಾರೆ. ಕ್ಯಾಂಡಿ ಬಾರ್ ರಾಪರ್‌ಗಳು, ಟಿಕೆಟ್ ಸ್ಟಬ್‌ಗಳು ಹಾಗೂ ಸೋಡಾ ಕ್ಯಾನುಗಳ ನಡುವೆ ಬ್ಯಾಗ್ ಸಿಕ್ಕಿರುವುದು ಆತನಿಗೆ ಭಾರೀ ಅಚ್ಚರಿ ಮೂಡಿಸಿದೆ.
ಇದಾದ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಆ ಬ್ಯಾಗಿನ ಮಾಲೀಕರನ್ನು ಹುಡುಕುವ ಯತ್ನಕ್ಕೆ ಮುಂದಾಗಿದ್ದಾಗಿ ಸ್ಟೀವನ್ಸ್ ತಿಳಿಸಿದ್ದಾರೆ. 1973ರಲ್ಲಿ ಈ ಥಿಯೇಟರ್‌ನಲ್ಲಿ ಆಯೋಜಿಸಲಾಗಿದ್ದ ಗ್ರೇಟ್‌ಫುಲ್ ಡೆಡ್ ಕನ್ಸರ್ಟ್‌ನ ಟಿಕೆಟ್ ಹಾಗೂ ಕ್ಯಾಲಿಫೋರ್ನಿಯಾ ಚಾಲಕರ ಲೈಸೆನ್ಸ್‌ಗಳು ಈ ಬ್ಯಾಗಲ್ಲಿ ಸಿಕ್ಕ ಮೇಲೆ ಅದರ ಸುಳಿವನ್ನು ಆಧರಿಸಿ, “ಕೊಲ್ಲೀನ್ ಡಿಸ್ಟಿನ್ ಹೆಸರಿನ ಈ ಮಹಿಳೆಯನ್ನು ಯಾರಾದರೂ ಬಲ್ಲಿರಾ…?” ಎಂದು ಥಿಯೇಟರ್‌ನ ಫೇಸ್ಬುಕ್ ಪೇಜ್‌ನಲ್ಲಿ ಕೇಳಲಾಗಿದೆ.
“ನಿರ್ವಹಣಾ ಕೆಲಸ ಮಾಡುತ್ತಿದ್ದ ವೇಳೆ ನಮಗೆ ವ್ಯಾಲೆಟ್ ಒಂದು ಸಿಕ್ಕಿದ್ದು, ಅದರಲ್ಲಿ ಜನರ ಚಿತ್ರಗಳು ಇದ್ದು, ಆ ಕಾಲದ್ದಾದರೂ ಇವರೆಲ್ಲಾ ಸೂಪರ್ ಕೂಲ್ ಆಗಿ ಕಾಣುತ್ತಿದ್ದಾರೆ. ಕೆಲವರಿಗೆ ಇವು ಬೇಕಾಗಬಹುದು. ಹಾಗಾಗಿ ನಿಮಗೆ ಕೊಲೀನ್ ತಿಳಿದಿದ್ದರೆ ನಮಗೆ ಅವರ ಸಂಪರ್ಕದ ವಿವರ ಕೊಡಿ” ಎಂದು ಕೋರಲಾಗಿತ್ತು.
ಈ ಪೋಸ್ಟ್ ಸಾವಿರಾರು ಬಾರಿ ಶೇರ್ ಆಗಿ, ಕೊನೆಗೂ ಡಸ್ಟಿನ್‌ರ ಕಿವಿಗೆ ಬಿದ್ದಿದೆ. ಮೇ 25ರಂದು ಈ ಕರೆಗೆ ಓಗೊಟ್ಟ ಡಸ್ಟಿನ್ ಕೊನೆಗೂ ತಮ್ಮ ಬ್ಯಾಗನ್ನು ಪಡೆದುಕೊಂಡಿದ್ದಾರೆ.
1975ರಲ್ಲಿ ಅದೇ ಥಿಯೇಟರ್‌ನಲ್ಲಿ ಚಲನಚಿತ್ರವೊಂದನ್ನು ನೋಡಲು ಹೋಗಿದ್ದ ವೇಳೆ ಕಳೆದುಕೊಂಡಿದ್ದ ಈ ವ್ಯಾಲೆಟ್ ಆಗ ಕೆಂಪಗಿದ್ದು ಬಹಳ ಹಳೆಯದಾದ ಕಾರಣ ಈಗ ಕಂದು ಬಣ್ಣಕ್ಕೆ ತಿರುಗಿದೆ ಎಂದ ಡಸ್ಟಿನ್, ಆ ವೇಳೆ ವ್ಯಾಲೆಟ್‌ನಲ್ಲಿ $200 ಮೌಲ್ಯದ ಚೆಕ್ ಒಂದು ಇತ್ತೆಂದಿದ್ದಾರೆ.
ತಮ್ಮ 20ರ ಪ್ರಾಯದಲ್ಲಿ ಕಳೆದುಕೊಂಡಿದ್ದ ವ್ಯಾಲೆಟ್ ಈಗ ತಮಗೆ ಸಿಕ್ಕಿರುವುದರಿಂದ ಒಂದಷ್ಟು ವರ್ಷಗಳಷ್ಟು ಹಿಂದಕ್ಕೆ ಹೋದಂತೆ ಭಾಸವಾದಂತೆ ಆಗುತ್ತಿದೆ ಎಂದು ಡಸ್ಟಿನ್ ತಿಳಿಸಿದ್ದಾರೆ.