ಕೊಲ್ಕತ್ತಾ: ವಿಶ್ವವಿದ್ಯಾಲಯದಲ್ಲಿ ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳಿಗೆ ಕೊಲ್ಕತ್ತಾ ಹೈಕೋರ್ಟ್ ಬಿಸಿ ಮುಟ್ಟಿಸಿದ್ದು, ಸಂತ್ರಸ್ತ ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚ ಭರಿಸುವಂತೆ ಆದೇಶಿಸಿದೆ. ಶಾಲಾ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಂತೆಯೂ ಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಮೌಶಮಿ ಭಟ್ಟಾಚಾರ್ಯ ಅವರ ನ್ಯಾಯಪೀಠ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ನಡೆಸಿದ ರ್ಯಾಗಿಂಗ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಕೃತ್ಯಗಳಿಗೆ ಯಾವುದೇ ಕ್ಷಮೆ ಇಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ.
ಆರೋಪಿತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕುಳಿತುಕೊಳ್ಳದಂತೆ ವಿವಿ ಆಡಳಿತ ಮಂಡಳಿ ನಿರ್ಬಂಧ ಹೇರಿದ್ದನ್ನು ಪ್ರಶ್ನಿಸಿ ಆರೋಪಿತ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸಂತ್ರಸ್ತ ವಿದ್ಯಾರ್ಥಿನಿಯ ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಬೇಕು. ಪರೀಕ್ಷೆ ಬರೆಯುವಾಗ ಹೊರತುಪಡಿಸಿ ಬೇರೆ ಕಾರಣಗಳಿಗೆ ವಿವಿ ಪ್ರವೇಶ ನಿರ್ಬಂಧಿಸಲಾಗಿದೆ. ಕಲಿಕಾ ಸಾಮಗ್ರಿಗಳು ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ಪೋಷಕರು ತೆಗೆದುಕೊಂಡು ಬರಬಹುದು. ಶಾಲಾ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಂತೆಯೂ ಕೋರ್ಟ್ ತೀರ್ಪು ನೀಡಿದೆ.