ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳಲ್ಲಿ ಕ್ಯಾಲ್ಸಿಯಂ ಕೂಡ ಒಂದು. ಕ್ಯಾಲ್ಸಿಯಂ ನಮ್ಮ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಕಡಿಮೆಯಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆಯಾ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಅದ್ರ ಲಕ್ಷಣಗಳು ಇಂತಿವೆ:
ನಿಮ್ಮ ಮೂಳೆಗಳು ದುರ್ಬಲವಾಗಿವೆ ಅಂದ್ರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾಗಿದೆ ಎಂಬುದು ಸ್ಪಷ್ಟ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲವಾಗುತ್ತವೆ. ಮಕ್ಕಳಲ್ಲಿ ಬಹುಬೇಗ ಮೂಳೆ ಮುರಿತ ಕಂಡು ಬರುತ್ತದೆ. ಸ್ನಾಯುಗಳು ಬಿಗಿಯುವುದು, ನೋವು ಕಾಣಿಸಿಕೊಳ್ಳುತ್ತದೆ.
ಕ್ಯಾಲ್ಸಿಯಂ ಕೊರತೆಯ ಇನ್ನೊಂದು ಲಕ್ಷಣ ಹಲ್ಲು ದುರ್ಬಲವಾಗುವುದು. ದಂತಕ್ಷಯ ಕ್ಯಾಲ್ಸಿಯಂ ಕೊರತೆಯ ಮೊದಲ ಲಕ್ಷಣ. ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆಯಾದ್ರೆ ತಡವಾಗಿ ಹಲ್ಲುಗಳು ಬರುತ್ತವೆ.
ಉಗುರುಗಳು ದುರ್ಬಲವಾಗುವುದು ಇನ್ನೊಂದು ಲಕ್ಷಣ. ಆರೋಗ್ಯಕರ ಉಗುರಿಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಕ್ಯಾಲ್ಸಿಯಂ ಕಡಿಮೆಯಾದ್ರೆ ಉಗುರುಗಳು ಬಹಳ ಬೇಗ ಮುರಿದು ಬೀಳುತ್ತವೆ.
ಹುಡುಗಿಯರಲ್ಲಿ ತಡವಾಗಿ ಮುಟ್ಟು ಶುರುವಾದ್ರೆ ಅವರಲ್ಲಿ ಕ್ಯಾಲ್ಸಿಯಂ ಕೊರತೆಯಿದೆ ಎಂದೇ ಅರ್ಥ.
ಕೂದಲು ಉದುರುತ್ತಿದ್ದರೆ, ಕೂದಲಿನ ಬೆಳವಣಿಗೆ ಕುಂಟಿತಗೊಂಡಿದ್ದರೆ ಕ್ಯಾಲ್ಸಿಯಂ ಕೊರತೆಯಾಗಿದೆ ಎಂಬುದು ಸ್ಪಷ್ಟ.
ಸದಾ ದಣಿವು ಎನ್ನುತ್ತಿರುವ ವ್ಯಕ್ತಿಯಲ್ಲೂ ಕ್ಯಾಲ್ಸಿಯಂ ಕೊರತೆ ಎದ್ದು ಕಾಣುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಮೂಳೆ, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗೆ ನಿದ್ದೆ ಬರುವುದಿಲ್ಲ. ಇದು ಮಾನಸಿಕ ಒತ್ತಡ, ಭಯಕ್ಕೂ ಕಾರಣವಾಗುತ್ತದೆ. ಜೊತೆಗೆ ದಣಿವಾಗುತ್ತದೆ.