ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದಿಂದ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎನ್.ಡಿ.ಎ.ನಲ್ಲಿದ್ದ ಶಿವಸೇನೆ ಮತ್ತು ಅಕಾಲಿದಳ ಮೈತ್ರಿಕೂಟದಿಂದ ಹೊರಹೋಗಿದ್ದು, ಇವೆರಡು ಪಕ್ಷಗಳನ್ನು ಪ್ರತಿನಿಧಿಸಿದ್ದ ಸಚಿವರು ರಾಜೀನಾಮೆ ನೀಡಿದ್ದಾರೆ. ಅದೇ ರೀತಿ ಕೇಂದ್ರ ಸಚಿವರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಮತ್ತು ಸುರೇಶ್ ಅಂಗಡಿ ಅವರ ನಿಧನದಿಂದ ಸಚಿವ ಸ್ಥಾನಗಳು ಖಾಲಿಯಾಗಿವೆ.
ಹೀಗೆ ಖಾಲಿಯಾದ ಸಚಿವ ಸ್ಥಾನಗಳಿಗೆ ಬಿಹಾರದಿಂದ ಸುಶೀಲ್ ಕುಮಾರ್ ಮೋದಿ, ಮಧ್ಯಪ್ರದೇಶದಿಂದ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಕರ್ನಾಟಕದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಸಚಿವ ಸ್ಥಾನಕ್ಕೆ ಲಿಂಗಾಯಿತ ಸಮುದಾಯದವರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದ್ದು, ರಾಜ್ಯದಿಂದ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ. ಶಿವಕುಮಾರ ಉದಾಸಿ, ಜಿ.ಎಸ್. ಬಸವರಾಜು, ಬಿ.ವೈ. ರಾಘವೇಂದ್ರ ಸೇರಿದಂತೆ ಹಲವರ ಹೆಸರು ಪರಿಗಣನೆಯಲ್ಲಿದ್ದು, ರಾಜ್ಯದಿಂದ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.