
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸಂಪುಟಕ್ಕೆ ಸರ್ಜರಿ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಸಂಪುಟ ಪುನಾರಚನೆ ಕುರಿತ ಚರ್ಚೆ ಆರಂಭವಾಗಿದೆ.
ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದಲ್ಲಿ ಸಂಪುಟ ಸಣ್ಣ ಪ್ರಮಾಣದಲ್ಲಿ ಪುನಾರಚನೆ ಆಗಲಿದೆ. ಅಸಮರ್ಥರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಸ್ಥಾನ ನೀಡಬಹುದು. ಕಾಂಗ್ರೆಸ್ ಗೆ ಕಡಿಮೆ ಸ್ಥಾನಗಳು ಬಂದಲ್ಲಿ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸುವ ಸಾಧ್ಯತೆ ಇದೆ. ಇದರಿಂದ ಮಕ್ಕಳು ಮತ್ತು ಕುಟುಂಬ ಸದಸ್ಯರನ್ನು ಕಣಕ್ಕಿಳಿಸಿದ ಸಚಿವರಿಗೆ ನೇರವಾಗಿ ಬಿಸಿ ತಟ್ಟುವ ಸಾಧ್ಯತೆ ಇದೆ.
ಸಂಪುಟದ ಸದಸ್ಯರ ಕುಟುಂಬದವರು ಸೋತಲ್ಲಿ ಸಂಬಂಧಿಸಿದ ಸಚಿವರು ನೈತಿಕ ಹೊಣೆ ಹೊತ್ತು ಸಂಪುಟದಿಂದ ಹೊರಗೂಳಿಯಬೇಕಾಗುತ್ತದೆ. ಲೋಕಸಭೆ ಚುನಾವಣೆ ಫಲಿತಾಂಶ ಕೆಲವು ಸಚಿವರ ಭವಿಷ್ಯವನ್ನು ನಿರ್ಧರಿಸಲಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಸಂಪುಟ ಪುನಾರಚನೆಯ ಕುರಿತಾಗಿ ಚರ್ಚೆಗಳು ಆರಂಭವಾಗಿವೆ.
ಈ ಬಾರಿ ಅಭ್ಯರ್ಥಿಗಳ ಕೊರತೆಯ ಕಾರಣ ಸಚಿವರ ಮಕ್ಕಳು ಮತ್ತು ಕುಟುಂಬ ಸದಸ್ಯರನ್ನು ಕಣಕ್ಕಿಳಿಸಲಾಗಿತ್ತು. ಕುಟುಂಬ ರಾಜಕಾರಣದ ಆರೋಪ ಬಂದರೂ ಕೂಡ ಇದನ್ನು ಪ್ರಯೋಗವಾಗಿ ಸ್ವೀಕರಿಸಿದ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸಚಿವರಿಗೆ ನೀಡಿತ್ತು. ಒಂದು ವೇಳೆ ಕುಟುಂಬದವರು ಪರಾಭವಗೊಂಡಲ್ಲಿ ಸಚಿವರ ತಲೆದಂಡವಾಗಲಿದೆ ಎಂದು ಹೇಳಲಾಗಿದೆ.